Advertisement

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

03:06 PM Dec 28, 2024 | Team Udayavani |

ಬದುಕೆಂದರೆ ಒಮ್ಮೆ ನಲಿವು, ಒಮ್ಮೆ ನೋವು, ಒಮ್ಮೆ ಏರು ಒಮ್ಮೆ ಇಳಿತ, ಒಮ್ಮೆ ಸುಖ, ಒಮ್ಮೆ ದುಃಖ, ಒಮ್ಮೆ ಗೆಲುವು, ಒಮ್ಮೆ ಸೋಲು ಯಾವುದಾದರೂ ಸರಿ ನಿರಂತರವಾಗಿರುವುದಿಲ್ಲ. ಈ ಸಮಯ ಕಳೆದು ಹೋಗುತ್ತದೆ ಎಂಬ ಕೃಷ್ಣವಾಣಿ ಸರ್ವ ಸಮಯಕ್ಕೂ, ಯಾವ ಭಾವವೂ ಶಾಶ್ವತವಲ್ಲ ಎಂಬುದನ್ನು ತಿಳಿಸುತ್ತಾ ಸಮಾಧಾನಿಸುತ್ತದೆ. ನೆನ್ನೆಯಿಂದ ಕಲಿಯುತ್ತಾ ನಾಳೆಯ ಭರವಸೆಯೊಂದಿಗೆ ಇಂದು ಸಾರ್ಥಕ ಬದುಕನ್ನು ಬದುಕುವುದು ಮುಖ್ಯ.

Advertisement

ಒಂದರ ಮುಕ್ತಾಯ ಮತ್ತೂಂದಕ್ಕೆ ನಾಂದಿ, ಪ್ರತೀ ಹೊಸ ಮುನ್ನುಡಿ ಹೊಸ ಚೈತನ್ಯ, ನವನಮೋನ್ಮೆàಶದಿಂದ ಕೂಡಿದರೂ ಅನಿರೀಕ್ಷಿತ ತಿರುವುಗಳು ಮತ್ತು ನಾಳೆಯೆಂಬ ಅನವರತ ಧಾವಂತ ಎಲ್ಲರಿಗೂ ಸಹಜ. ಬದುಕು ಕಲಿತು ಬರೆವ ಪರೀಕ್ಷೆಯಲ್ಲ , ಪ್ರತೀ ಪರೀಕ್ಷೆಗಳಿಂದ ಕಲಿವ ಪಾಠ. ಕಳೆದ ಪ್ರತೀ ಘಳಿಗೆ, ನಿಮಿಷ, ಗಂಟೆ ಹೊಸತೊಂದನ್ನು ಕಲಿಸುತ್ತದೆ, ಪ್ರತಿಯೊಂದರ ಗ್ರಹಿಕೆಯಿಂದ ಮುಂದಿಡುವ ಹೆಜ್ಜೆಗೆ ಹೊಸ ಆಯಾಮ ಸಿಗುತ್ತದೆ.

ನೆನಪು ಮತ್ತು ನಿರೀಕ್ಷೆ
ಕಳೆವ ಪ್ರತೀ ವರುಷಗಳು ನಮ್ಮಲ್ಲಿ ಅಗಾಧ ನೆನಪುಗಳನ್ನು ಉಳಿಸಿ ಬಿಡುತ್ತದೆ. 2024ರ ಹಲವು ತಿರುವುಗಳು ನನಗೆ ವೈಯಕ್ತಿಕವಾಗಿ ಹೊಸ ಉತ್ಸಾಹವನ್ನು ತಂದಿತು. ಬದುಕಿಗೆ ಪುಟ್ಟ ಚೈತನ್ಯ ಒಂದು ಮಡಿಲು ತುಂಬಿದೆ. ಅದಾವುದೇ ಒತ್ತಡಗಳಿದ್ದರ ಎಲ್ಲವನ್ನು ಮರೆಸುವುದು ಕನ್ನಡದ ಕೆಲಸಗಳು. ಅಂತಹದೇ ಅಪ್ಯಾಯಮಾನ ಭಾವ ಹೊಮ್ಮಿಸುವ ಕನ್ನಡ ಪುಸ್ತಕವನ್ನು ಪ್ರಕಟಿಸುವಲ್ಲಿ ಅಳಿಲು ಸೇವೆ ಮಾಡುವ ಅವಕಾಶ ಒದಗಿದೆ. ಬರಹದ ಗೀಳಿಗೆ ಪುಸ್ತಕದ ರೂಪ ದೊರೆತು ಮುದ್ರಣ ಕಂಡಿದೆ. ನುಡಿಹಬ್ಬದಲ್ಲಿ ಬಿಡುಗಡೆಗೊಂಡ ಪುಸ್ತಕವೊಂದನ್ನು ಪಾಲುದಾರಳಾಗಿದ್ದೇನೆ.

ನಿರೀಕ್ಷೆಗಳ ಪಟ್ಟಿಯಲ್ಲಿ ಇರುವುದು ಸದ್ಯಕ್ಕೆ ಖಾಲಿ ಹಾಳೆ. ಬಂದ ಅವಕಾಶಗಳನ್ನು ಉತ್ತಮವಾಗಿ ಸದುಪಯೋಗ ಮಾಡಿಕೊಳ್ಳುವುದು ಮುಖ್ಯ. ನಾಳೆಯ ನಾನು ನೆನ್ನೆಯ ನನಗಿಂತ ಹೇಗೆ ಭಿನ್ನವಾಗಿರಬಹುದು ಎಂಬುದನ್ನು ಯೋಚಿಸಬೇಕು ಸವಿಯಾದ ಬದುಕು ವ್ಯರ್ಥವಾಗಿ ಸವೆಯದಂತೆ ಸವಿಯಬೇಕಿದೆ.

Advertisement

ಜರ್ಮನಿಯಲ್ಲಿನ ಬದುಕು ಭಾರತದಲ್ಲಿರುವ ಜನರಿಗಿಂತ ಬಹು ಭಿನ್ನ. ನಾವು ತಿಂಗಳಿಗೊಮ್ಮೆ ಒಂದು ಅರ್ಥಪೂರ್ಣ ಆಚರಣೆ, ಹಬ್ಬಗಳಿಂದ ಸದಾ ಲವಲವಿಕೆ ಕಾಪಾಡಿಕೊಳ್ಳುತ್ತೇವೆ. ಕ್ರೈಸ್ತ ಧರ್ಮದವರಿಗೆ ಕ್ರಿಸ್‌ಮಸ್‌ ಮುಖ್ಯ ಆಚರಣೆಯಾಗಿರುವುದರಿಂದ ವರ್ಷಾಂತ್ಯ ಹಾಗೂ ಹೊಸ ವರ್ಷಕ್ಕೆ ಇಲ್ಲಿನ ಉತ್ಸಾಹ ಇಮ್ಮಡಿಯಾಗುತ್ತೆ. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸಂಜೆ ನಾಲ್ಕರ ಸಮಯಕ್ಕೆ ಕತ್ತಲಾಗುವುದರಿಂದ ಹಲವು ಬಾರಿ ಎಲ್ಲ ಕೆಲಸವೂ ಆಮೆಯ ಬೆನ್ನೇರಿರುತ್ತದೆ. ಜತೆಗೆ ಅಸಾಧ್ಯ ಚಳಿ. ಹೊರ ಹೋಗಲು ಎರಡು ಮೂರು ಪದರದ ಬಟ್ಟೆಗಳಿಲ್ಲದಿದ್ದರೆ ಹೊರಗಡೆ ಕಾಲಿಡಲೂ ಆಗುವುದಿಲ್ಲ. ಮನೆಯಲ್ಲಿಯೂ ಬಿಸಿಯನ್ನುಂಟು ಮಾಡುವ ಹೀಟರ್‌ಗಳಿರದಿದ್ದರೆ ಜೀವಿಸಲಾಗುವುದಿಲ್ಲ . ಆಹಾರ, ಬಟ್ಟೆ ಎಲ್ಲವೂ ಋತುಮಾನಕ್ಕೆ ತಕ್ಕಂತೆ ಬದಲಿಸಿಕೊಳ್ಳಲೇ ಬೇಕಾದ ಅನಿವಾರ್ಯ. ಇವೆಲ್ಲ ಸವಾಲುಗಳ ನಡುವೆಯೂ ಕುಂಬಳಕಾಯಿ ಮೇಳ ಹಾಲೋವಿನ್‌ನನ್ನು ಆಚರಿಸುತ್ತಾರೆ.

ಕ್ರಿಸ್‌ಮಸ್‌ಗಾಗಿ ಹಲವಾರು ಆಲಂಕಾರಗಳು, ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರಗಳು, ಕ್ರಿಸ್‌ಮಸ್‌ ಜಾತ್ರೆ, ಮಾರುಕಟ್ಟೆಗಳು ಕೊರೆವ ಚಳಿಯಲ್ಲೂ ಉತ್ಸಾಹ ಮೈತುಂಬಿಸಿಕೊಂಡು ಕತ್ತಲನ್ನೂ ನಿರ್ಲಕ್ಷಿಸಿ ಮತ್ತೆ ಬದುಕಲು ಆಮ್ಲಜನಕದಂತೆ ಜೀವಂತಿಕೆ ತುಂಬುತ್ತದೆ.

ನವೆಂಬರ್‌ನ ವಾರಾಂತ್ಯದಿಂದ ಡಿಸೆಂಬರ್‌ ತಿಂಗಳ ಕಡೆಯ ವಾರದವರೆಗೆ ನಡೆವ ಕ್ರಿಸ್‌ಮಸ್‌ ಮಾರುಕಟ್ಟೆಗಳಿಗೆ ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅಜ್ಜಿ ತಾತಂದಿರು ಮೊಮ್ಮಕಳಿಗಾಗಿ ಉಡುಗೊರೆಗಳನ್ನು ತರುವುದು, ಒಂದೊಂದು ಮನೆಯಲ್ಲೂ ಕ್ರಿಸ್‌ಮಸ್‌ ಗಿಡಗಳನ್ನು ವಿಶೇಷವಾಗಿ ಅಲಂಕರಿಸುವುದು, ಮನೆಯ ಹೊರ ಭಾಗ ಹಾಗೂ ಕಂಪೌಂಡ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸುವುದು ರಸ್ತೆಯ ಬೋಳು-ಬೋಳು ಮರಗಳನ್ನೂ ದೀಪಗಳಿಂದ ಅಲಂಕರಿಸುವುದು ಜೀವನದ ಪ್ರತೀ ಅನಾನುಕೂಲಕರ ಸಂದರ್ಭಗಳನ್ನು ಧನಾತ್ಮಕವಾಗಿ ಹೇಗೆ ಮಾರ್ಪಡಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿರುತ್ತದೆ.

ಹೊಸ ವರ್ಷಕ್ಕೆ ಪಟಾಕಿಗಳ ಚಿತ್ತಾರ ಗಗನಕ್ಕೇರುತ್ತದೆ. ನೆಲದಿಂದ ಆಕಾಶಕ್ಕೆ ಜಿಗಿದು ಬಣ್ಣ ಬಣ್ಣಗಳ ರಂಗವಲ್ಲಿ ಚಿತ್ರಿಸಿ ನೋಡಲು ಆಕರ್ಷಿತವಾಗಿರುತ್ತದೆ. ಅದಕ್ಕಾಗಿಯೇ ಸಾವಿರಾರು ಜನರು ನದಿಯ ತೀರದಲ್ಲಿ ವಿಶಾಲ ಮೈದಾನದಲ್ಲಿ ಸೇರಿ ಸಂಭ್ರಮಿಸುತ್ತಾರೆ.

ಅಸಂಖ್ಯಾಕ ಪಟಾಕಿಗಳನ್ನು ಸಿಡಿಸುವುದು ಒಂದಾದರೆ ಮರುದಿನ ಅದರ ಸ್ವತ್ಛತೆಯ ಬಗೆಗೂ ಇಲ್ಲಿ ಗಮನಹರಿಸುತ್ತಾರೆ. ಸಹಜವಾಗಿಯೇ ಇಲ್ಲಿ ಸಾರ್ವಜನಿಕ ರಸ್ತೆಗಳು ಸದಾ ಸ್ವತ್ಛವಾಗಿರುವಂತೆ ನೋಡಿಕೊಳ್ಳುತ್ತಾರೆ. ಇಂತಹ ವಿಶೇಷ ಜಾತ್ರೆ, ಸಂದರ್ಭಗಳು ಮುಗಿದ ಅನಂತರವೂ ಸ್ವತ್ಛಗೊಳಿಸುವ ವಾಹನಗಳು ಮರುದಿನವೇ ರಸ್ತೆಯನ್ನು ನೂರಾರು ಪಟಾಕಿಗಳು ಸಿಡಿದ ಸುಳಿವೇ ಇಲ್ಲದಂತೆ ಶುದ್ಧಗೊಳಿಸಿರುತ್ತವೆ. ಇಲ್ಲಿನ ಸ್ವತ್ಛತೆ, ಅಚ್ಚುಕಟ್ಟು , ಶಿಸ್ತು ಹೊಸತರಲ್ಲಿ ಸಾಂಸ್ಕೃತಿಕ ಆಘಾತವನ್ನುಂಟು ಮಾಡಿತ್ತೆಂದರೆ ಅತಿಶಯೋಕ್ತಿಯೇನಲ್ಲ . ಹಾಗೆಂದು ಇಲ್ಲಿ ಸ್ವತ್ಛವಾಗಿರದ ರಸ್ತೆಗಳು ಇಲ್ಲವೆ ಇಲ್ಲವೆಂದಲ್ಲ. ಇಲ್ಲಿ ಸ್ವತ್ಛತೆಗೆ ವ್ಯಕ್ತಿಗತ ಶಿಸ್ತು, ಅರಿವು ಮತ್ತು ಜಾಗೃತಿ ಮುಖ್ಯ ಕಾರಣ.

ಋತುಮಾನಕ್ಕೆ ತಕ್ಕಂತೆ ಬದಲಾಗುವ ಪ್ರಕೃತಿ, ಅದಕ್ಕೆ ತಕ್ಕ ಹೊಂದಾಣಿಕೆಯನ್ನು ಅದೇ ಮಾಡಿಕೊಳ್ಳುತ್ತದೆ. ಮಾನವ ಸಹ ತನ್ನ ಬದಲಾಗುವ ಪ್ರಕೃತಿಗೆ ತಕ್ಕಂತೆ ಹೊಂದಿಕೊಳ್ಳಲು ಹಲವಾರು ಆವಿಷ್ಕಾರವನ್ನು ಮಾಡುತ್ತಾ ಸಾಗುತ್ತಾನೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನಂತಹ ಹೊಸ ತಂತ್ರಜ್ಞಾನಗಳು ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ. ತಂತ್ರಜ್ಞಾನ ಮುಂದುವರೆಯುವ ಹೆಸರಿನಲ್ಲಿ ಮಾನವೀಯತೆ ಮರೆಯದೆ ಮುಂದುವರೆಯಬೇಕಿದೆ. ಆಧುನಿಕರಣದ ಹೆಸರಿನಲ್ಲಿ ಮೂಲ ಬೇರುಗಳನ್ನು ಅಲ್ಲಗೆಳೆಯದೆ ನಡೆಯಬೇಕಿದೆ. ಟ್ರೆಂಡ್‌ ಆಗುವ ನೆಪದಲ್ಲಿ ಹುಚ್ಚಾಟಗಳು ಹೆಚ್ಚುತ್ತಿವೆ. ಕೇವಲ ಸಂವತ್ಸರವಷ್ಟೇ ಅಲ್ಲ ಆಲೋಚನೆಗಳು ಕೂಡ ಉತ್ತಮ ಹಾದಿಯಲ್ಲಿ ಹೊಸತಾಗಲಿ.

* ಶೋಭಾ ಚೌಹ್ಹಾಣ್‌ ಫ್ರಾಂಕ್‌ ಫರ್ಟ್

Advertisement

Udayavani is now on Telegram. Click here to join our channel and stay updated with the latest news.

Next