Advertisement
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಆಚರಣೆಯನ್ನು ಕ್ರಿಸ್ಮಸ್‌ನಿಂದಲೇ ಆರಂಭಿಸಲಾಗುತ್ತದೆ. ನ್ಯೂ ಇಯರ್ ಬಂತೆಂದರೆ ಸಾಕು ಬೆಂಗಳೂರಿನಲ್ಲಿ ಥಟ್ ಎಂದು ಕಣ್ಮುಂದೆ ಭಾಸವಾಗುವುದು ಹರ್ಷೋದ್ಗಾರ, ಕೇಕೆ-ಶಿಳ್ಳೆ, ಕೂಗಾಟ, ಪಬ್‌ಗಳಲ್ಲಿ ನಶೆಯ ಗುಂಗಲ್ಲಿ ಕಿವಿಗಡಚ್ಚುವ ಡಿಜೆ ಸದ್ದು, ಆಗಸದೆತ್ತರದಲ್ಲಿ ಮೋಡಿ ಮಾಡುವ ಹೂ ಕುಂಡಗಳು, ಭಕ್ತರಿಂದ ತುಂಬಿ-ತುಳುಕುವ ದೇವಾಲಯಗಳು, ಗ್ರಾಹಕರಿಂದ ತುಂಬಿ ತುಳುಕುವ ಬಟ್ಟೆ,ಚಿನ್ನಾಭರಣ ಮಳಿಗೆಗಳು, ಹೌಸ್‌ಫುಲ್ ಆಗಿರುವ ಶಾಪಿಂಗ್ ಮಾಲ್‌ಗಳು, ಬಾರ್‌ಗಳ ತುಂಬಾ ಮದ್ಯಪ್ರಿಯರದ್ದೇ ಕಾರು-ಬಾರು. ಬೆಳದಿಂಗಳ ರಾತ್ರಿಯಲಿ ಪ್ರಮುಖ ರಸ್ತೆಯುದ್ದಕ್ಕೂ ಕಂಗೊಳಿಸುವ ವಿದ್ಯುತ್ ದೀಪಗಳು, ಕುಟುಂಬಸ್ಥರು ಕೇಕ್ ಕತ್ತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು….
ಹೊಸ ವರ್ಷ ಸ್ವಾಗತಿಸಲು ಇನ್ನೇನು ಕೌಂಟ್‌ಡೌನ್ ಶುರುವಾಗಿದೆ ಎನ್ನುವಾಗಲೇ ಐಟಿ ಸಿಟಿಯ ಸಾವಿರಾರು ಪಬ್‌ಗಳಲ್ಲಿ ಮಂದ ಬೆಳಕಿನಲ್ಲಿ ನೃತ್ಯ ಮಾಡಲು, ವಿಶೇಷ ಪಾರ್ಟಿಗಳಲ್ಲಿ ಮದ್ಯಪಾನ ಮಾಡಿ ನಾನಾ ಹಾಡುಗಳಿಗೆ ಹೆಜ್ಜೆ ಹಾಕಿ ಹೊಸ ವರ್ಷ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ. ಪ್ರತಿಷ್ಠಿತ ಪಬ್‌ಗಳು, ಪಂಚತಾರಾ ಹೋಟೆಲ್ ಗಳು, ಬಾಡಿಗೆ ಅಪಾರ್ಟ್‌ಮೆಂಟ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಹೊಸ ವರ್ಷದ ಸಂಭ್ರಮಾಚರಣೆಯ ರಾತ್ರಿಗೆ ಪಬ್, ರೆಸ್ಟೋರೆಂಟ್ ಗಳು ಪ್ಯಾಕೇಜ್ ಘೋಷಣೆ ಮಾಡಿದ್ದು, ಶೇ.85ರಷ್ಟು ಸೀಟುಗಳು ಬುಕ್ ಆಗಿವೆ. ಪ್ರತಿಷ್ಠಿತ ಓರಿಯನ್, ಮಂತ್ರಿ ಮಾಲ್, ಗರುಡ ಮಾಲ್, ಫೋರಂ ಮಾಲ್‌ಗಳು ಸೇರಿದಂತೆ ರಾಜಧಾನಿಯ ಬಹುತೇಕ ಶಾಪಿಂಗ್ ಮಾಲ್‌ಗಳೂ ಹೊಸ ವರ್ಷಾಚರಣೆಗೆ ಸಿಂಗಾರಗೊಂಡಿವೆ.
Related Articles
ಹೊಸತನ್ನು ಸ್ವಾಗತಿಸೋಣ.
Advertisement
ಚರ್ಚ್‌ಸ್ಟ್ರೀಟ್‌ನಲ್ಲಿ ಪಬ್‌ಗಳ ಗಮ್ಮತ್ತುಬ್ರಿಗೇಡ್ ರಸ್ತೆಗೆ ತಾಕಿಕೊಂಡಿರುವ ಚರ್ಚ್‌ಸ್ಟ್ರೀಟ್‌ಗೆ ಕಾಲಿಟ್ಟರೆ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಬೆಳಕಿನ ಆಟದ
ಹೊಸ ಜಗತ್ತು ತೋರಿಸುವ ಹತ್ತಾರು ಪಬ್‌ಗಳಲ್ಲಿ ಮದ್ಯದ ಜೊತೆಗೆ ಮಾನಿನಿಯರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸುವ ವರ್ಗವೇ ಇದೆ. ಇಲ್ಲಿ ಹೊಸ ವರ್ಷ ಬಂತೆಂದರೆ ಗುಂಡು-ತುಂಡಿನೊಂದಿಗೆ ಹೊಗೆ ಬಿಡುವುದೇ ಗಮ್ಮತ್ತು. ಇಲ್ಲಿನ ಪಬ್ ಗಳಲ್ಲಿ ನ್ಯೂ ಇಯರ್ ಬಂತೆಂದರೆ ಭಿನ್ನಣ ನಡೆಯ ಲಲನೆಯರು ನೃತ್ಯದ ಮೂಲಕ ರಸಿಕರನ್ನು ತಮ್ಮತ್ತ ಸೆಳೆದು ಮೋಡಿ ಮಾಡುತ್ತಾರೆ. ಇದನ್ನು ಆಸ್ವಾಧಿಸಲೆಂದೇ ಸಾವಿರಾರು ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಮಾಯಾಲೋಕ ತೆರೆದಿಡುವ ಬ್ರಿಗೇಡ್ ರಸ್ತೆ
ನ್ಯೂ ಇಯರ್ ಬಂತೆಂದರೆ ಸಾಕು ಎಂಜಿ ರೋಡ್ ನಂತೆಯೇ ಬ್ರಿಗೇಡ್ ರಸ್ತೆಯೂ ಹೊಸ ಮಾಯಾಲೋಕವನ್ನೇ ತೆರೆದಿಡುತ್ತದೆ. ಕ್ರಿಸ್ಮಸ್ ನಿಂದಲೇ ಇಲ್ಲಿನ ರಸ್ತೆಗಳ ಎರಡೂ ಬದಿಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಳ್ಳುತ್ತವೆ. ಡಿ.31ರಂದು ಕತ್ತಲಾಗುತ್ತಿದ್ದಂತೆ ಇಲ್ಲಿ ಬೆಳಕಿನ ಹಬ್ಬ ಶುರುವಾಗುತ್ತದೆ. ಯುವಕ-ಯುವತಿಯರು ಇಲ್ಲಿನ ಬೀದಿ ಬದಿಗಳಲ್ಲೇ ಸ್ನೇಹಿತರೊಂದಿಗೆ ಹಾಡು, ಕುಣಿತದ ಮೂಲಕ ಎಂಜಾಯ್ ಮಾಡಲು ಅಣಿಯಾಗಿದ್ದಾರೆ. ಎಂಜಿ ರಸ್ತೆಯಲ್ಲಿ ಯಾಕೆ ಹಬ್ಬ?
ಬೆಂಗಳೂರಿನಲ್ಲಿ ಹೊಸ ವರ್ಷದಂದು ಹೊಸದಾಗಿ ಕಾಣಿಸುವ ಪ್ರಮುಖ ಸ್ಥಳವೆಂದರೆ ಮಹಾತ್ಮ ಗಾಂಧಿ ರಸ್ತೆ. ಎಂಜಿ ರಸ್ತೆಯಿಂದ
ಬ್ರಿಗೇಡ್ ರಸ್ತೆಯುದ್ದಕ್ಕೂ ದೀಪಾಲಂಕಾರಗೊಂಡಿರುವ ಬೀದಿಗಳಲ್ಲಿ ಸಾಗುವ ಲಕ್ಷಾಂತರ ಜನ ಸಾಗರ ಹರ್ಷೋದ್ಗಾರ
ಮೊಳಗಿಸುವುದನ್ನು ಕಣ್ತುಂಬಿ ಕೊಳ್ಳುವುದೇ ಚೆಂದ. ಈ ಬಾರಿಯೂ ಬೆಂಗಳೂರಿನ ಮೂಲೆ-ಮೂಲೆಗಳಿಂದ ಇಲ್ಲಿಗೆ ಜನ
ಜಂಗುಳಿಯೇ ದಾಂಗುಡಿ ಇಡಲಿದೆ. ಡಿಜೆ ಸದ್ದಿನೊಂದಿಗೆ ಮದ್ಯದ ನಶೆಯಲ್ಲೇ ಯುವಕ- ಯುವತಿಯರೆನ್ನದೇ ಎಲ್ಲ ವಯೋಮಾನದವರೂ ಶಿಳ್ಳೆ, ಚಪ್ಪಾಳೆಗಳ ಮೂಲಕ ರಾತ್ರಿ 12ರ ವರೆಗೆ ರಸ್ತೆಯುದ್ದಕ್ಕೂ ಗುಂಪು-ಗುಂಪಾಗಿ ತಿರುಗಾಡಲಿದ್ದಾರೆ. ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಕ್ರಿ.ಶ 1800ರ ವೇಳೆಗೆ ಬ್ರಿಟಿಷರು ಬೆಂಗಳೂರಿಗೆ ಆಗಮಿಸುವುದರೊಂದಿಗೆ ಜ.1ರ ಹೊಸ ವರ್ಷದ ಆಚರಣೆಗೆ ಈ ನಗರದಲ್ಲಿ ಮನ್ನಣೆ ದೊರಕಿದೆ. ಮಿಲಿಟರಿ ನೆಲೆಯಾಗಿದ್ದ ಕಂಟೋನ್ಮೆಂಟ್ ಬಳಿ ಬ್ರಿಟಿಷರು ಜ.1ರಂದು ಹೊಸ ವರ್ಷಾಚರಣೆ
ಆಚರಿಸುತ್ತಿದ್ದರು. ಕ್ರಮೇಣ ಸೌತ್ ಪರೇಡ್ ಎಂದು ಖ್ಯಾತಿ ಪಡೆದಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್‌ಗಳಲ್ಲಿ ಬ್ರಿಟಿಷರ ಅಭಿರುಚಿಗೆ ತಕ್ಕಂತೆ ಬಾರ್, ರೆಸ್ಟೋರೆಂಟ್‌ಗಳು ತಲೆ ಎತ್ತಿದ್ದವು. ನಂತರ ಇದೇ ಪ್ರದೇಶದಲ್ಲಿ ಬ್ರಿಟಿಷರು ಹೊಸ ವರ್ಷ ಆಚರಿಸುತ್ತಿದ್ದರು. ನಂತರದ ದಿನಗಳಲ್ಲಿ ಹೊಸ ವರ್ಷಾಚರಣೆಗೆ ಈ ರಸ್ತೆಗಳು ಪ್ರಾಮುಖ್ಯತೆ
ಪಡೆದುಕೊಳ್ಳುತ್ತಾ ಬಂದವು. 1949ರಿಂದ ಈ ಜಾಗಗಳಿಗೆ ಬೆಂಗಳೂರಿನ ಸಾರ್ವಜನಿಕರಿಗೂ ಮುಕ್ತ ಪ್ರವೇಶ ಸಿಕ್ಕಿತು. ಬಳಿಕ ಬೆಂಗಳೂರಿಗರೂ ಇಲ್ಲಿ ಜ.1ರಂದು ವರ್ಷಾಚರಣೆ ಮಾಡಲು ಪ್ರಾರಂಭಿಸಿದರು. 1990ರ ನಂತರ ಇಲ್ಲಿಗೆ ಸಾಮೂಹಿಕ ಆಚರಣೆಯ ಸ್ವರೂಪ ದೊರೆತಿದೆ. ಕ್ರಮೇಣ ಈ ಪ್ರದೇಶವು ಕಾರ್ಪೊರೇಟ್ ರೂಪ ತಳೆದು ಸಡಗರದ ನ್ಯೂ ಇಯರ್ ಆಚರಣೆ ಮುಂದುವರೆಸಿಕೊಂಡು ಬಂದಿದೆ. ರಾಜ್ಯ ರಾಜಧಾನಿಗೆ ಬಹುರಾಷ್ಟ್ರೀಯ ಕಂಪೆನಿಗಳು ಆಗಮಿಸಲಾರಂಭಿಸಿದ ಮೇಲೆ ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಬಂದು ನೆಲೆಸಿದ್ದ ಯುವ ಪೀಳಿಗೆಯೂ ಇಲ್ಲೇ ಹೊಸ ವರ್ಷ ಆಚರಿಸಲು ಶುರು ಮಾಡಿಕೊಂಡಿತು. ಹೀಗೆ ವರ್ಷದಿಂದ ವರ್ಷಕ್ಕೆ ಬ್ರಿಗೇಡ್, ಎಂಜಿ ರಸ್ತೆಗಳ ವರ್ಣರಂಜಿತ ಸಂಭ್ರಮ ಹೆಚ್ಚುತ್ತಲೇ ಇದೆ.