ಕೊಪ್ಪಳ: ಕೋವಿಡ್ ಕಾರ್ಮೋಡದ 2020ರ ವರ್ಷದಲ್ಲಿ ನೂರೆಂಟು ಸಂಕಷ್ಟ ಎದುರಿಸಿ 2021ರ ಹೊಸ ವರ್ಷಕ್ಕೆ ನೂರೆಂಟು ಕನಸುಗಳನ್ನು ಹೊತ್ತು ಜಿಲ್ಲೆಯ ಜನತೆ ಕಾಲಿಡುತ್ತಿದ್ದಾರೆ.
ಹೊಸ ವರ್ಷದಲ್ಲಿ ಸರ್ವರ ಬಾಳು ಪ್ರಜ್ವಲಿಸಲಿ. ಕೃಷಿಯು ಬೆಳೆಯಲಿ, ನೀರಾವರಿ ಹೆಚ್ಚಾಗಲಿ, ನೆನೆಗುದಿಗೆ ಬಿದ್ದ ಕಾಮಗಾರಿಯ ಪೂರ್ಣಗೊಳಿಸಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ವ ರಂಗದ ಅಭಿವೃದ್ಧಿಗೆ ಆದ್ಯತೆ ನೀಡಲಿ ಎನ್ನುತ್ತಿದೆ ಜಿಲ್ಲೆಯ ಜನ ಸಮೂಹ.
ಕೊಪ್ಪಳ ಜಿಲ್ಲೆಯು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಇನ್ನಷ್ಟು ವೇಬೇಕಾಗಿದೆ. 2020ರಲ್ಲಿ ಅಭಿವೃದ್ಧಿಯ ಜಪ ಮಾಡುತ್ತಿರುವಾಗಲೇ ಬರೊಬ್ಬರಿ ಎಂಟು ತಿಂಗಳುಕಾಲ ಕೋವಿಡ್ ಕರಿಛಾಯೆ ಜನರ ಜೀವನದಲ್ಲಿಆವರಿಸಿ ಜನರ ಬದುಕನ್ನು ಅತಂತ್ರಗೊಳಿಸಿತು. ಕೋವಿಡ್ ಭಯದಿಂದ ಬದುಕಿನ ಪಾಠ ಕಲಿತ ಜನತೆ ಕಷ್ಟದ ದಿನಗಳನ್ನು ಮರೆತು ಹೊಸ ಬದುಕಿನ ಕಡೆಗೆ ಹೆಜ್ಜೆಯನ್ನಿಡುತ್ತಿದ್ದಾರೆ. 2021ರ ವರ್ಷ ನಮ್ಮ ಬದುಕಿಗೆ ದಾರಿದೀಪವಾಗಲಿ. ಕೈತುಂಬ ದುಡಿಮೆ ಸಿಗಲಿ. ಹೊಟ್ಟೆ ತುಂಬ ಊಟ ಸಿಗಲಿ. ಸಮೃದ್ಧ ಮಳೆಯಾಗಲಿ. ರೈತ ಸಮೂಹ ನೆಮ್ಮದಿಯಿಂದಜೀವನ ನಡೆಸಲಿ. ಬೆಳೆಯು ಸಮೃದ್ಧಿಯಾಗಿ ಬರಲಿ. ಅದಕ್ಕೆ ತಕ್ಕಂತೆ ಬೆಲೆ ಸಿಗಲಿ ಎಂದೆನ್ನುತ್ತಿದೆ ಜನ ಸಮೂಹ.
ಜಿಲ್ಲೆಯು ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿದೆ. ಪಕ್ಕದಲ್ಲೇ ತುಂಗಭದ್ರೆ ಇದ್ದರೂ ಕುಡಿಯುವ ನೀರಿಗೆ ಜನ ಪರಿತಪಿಸುವಂತ ಸನ್ನಿವೇಶವು ಸೃಷ್ಟಿಯಾಗಿವೆ. ಈ ಮಧ್ಯೆ ಕೆರೆಗಳಿಗೆನೀರು ತುಂಬಿಸಿ ಕೃಷಿ ಭೂಮಿಗೆ ನೀರಾವರಿ ಹರಿಸುವ ಕೆಲಸ ಮಾಡಲಿ. ಜಿಲ್ಲೆಯಲ್ಲಿ ಹಲವು ನೀರಾವರಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಅದರಲ್ಲೂ ಕೃಷ್ಣಾ ಬಿ ಸ್ಕೀಂ, ಸಿಂಗಟಲೂರು ಏತ ನೀರಾವರಿ ಯೋಜನೆಸೇರಿದಂತೆ ಸಣ್ಣ ಸಣ್ಣ ಏತ ನೀರಾವರಿ ಯೋಜನೆಗಳಿಗೆ ವೇಗ ದೊರೆತರೆ ಮಾತ್ರ ರೈತರಜಮೀನಿಗೆ ನೀರು ಹರಿದು ಬರಲಿದೆ. ಇದಲ್ಲದೇ ನೀರಾವರಿಯ ಜೊತೆಗೆ ಜಿಲ್ಲಾದ್ಯಂತ ಇರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಕಾಯಕವೂ ನಡೆಯಲಿದೆ ಎಂದೆನ್ನುತ್ತಿದೆ ಜನ ಸಮೂಹ. ಇನ್ನೂ ಜಿಲ್ಲೆಯಲ್ಲಿ ಕುಂಟುತ್ತ ಸಾಗಿರುವ ನೂರಾರು ಕಾಮಗಾರಿಗಳಿಗೆ ವೇಗ ಸಿಗಬೇಕಿದೆ. ಕೊಪ್ಪಳದ ಯುಜಿಡಿ ಕಾಮಗಾರಿ, ಸ್ನಾತಕೋತ್ತರಅಧ್ಯಯನ ಕೇಂದ್ರ, ತಳಕಲ್ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಸಮಸ್ಯೆಗಳು ಈಡೇರಬೇಖೀದೆ. ಸಾವಿರಾರು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಲ್ಲಿರುವಆಟಿಕೆ ಸಾಮಗ್ರಿ ಘಟಕದ ಕ್ಲಸ್ಟರ್ ಇದೇ ವರ್ಷದಲ್ಲಿ ಕಾರ್ಯಾರಂಭ ಮಾಡಿ ಜನರಿಗೆಉದ್ಯೋಗ ದೊರೆಯುವಂತಾಗಲಿ ಎಂದೆನ್ನುತ್ತಿದೆ ಜನ ಸಮೂಹ.
ಜಿಲ್ಲೆಯ ಆರೋಗ್ಯ ಕ್ಷೇತ್ರ ಇನ್ನಷ್ಟು ಸುಧಾರಣೆ ಕಾಣಲಿ. ಜಿಲ್ಲಾಸ್ಪತ್ರೆ ದೊಡ್ಡದಾಗಿದ್ದರೂವೈದ್ಯರ ಸಂಖ್ಯೆಯು ತುಂಬ ಕಡಿಮೆಯಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿ. ಇದರೊಟ್ಟಿಗೆ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ,ಬೆಳೆಸುವ ಕೆಲಸವಾಗಲಿ. ಪ್ರವಾಸೋದ್ಯಮಕ್ಕೆಆದ್ಯತೆ ಸಿಗಲಿ. ರೈಲ್ವೆ ವಲಯದಲ್ಲಿ ಮಹತ್ತರ ಬದಲಾವಣೆಗಳಿಗಾಗಿ ಕಾಯುತ್ತಿದೆ ಕೊಪ್ಪಳ ಜಿಲ್ಲೆ.
ವಿದ್ಯುತ್ ಚಾಲಿತ ರೈಲುಗಳು ಸಂಚಾರ ಆರಂಭಿಸಲಿ. ರೈಲ್ವೆ ನಿಲ್ದಾಣಗಳು ಉನ್ನತೀಕರಿಸುವ ಕೆಲಸವಾಗಲಿ. ಶಿಕ್ಷಣಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯಲಿ. ಸರ್ಕಾರಿಶಾಲೆಗಳೂ ಉಳಿಯಲಿ. ಬಡ ಮಕ್ಕಳ ಜ್ಞಾನ ದೇಗುಲಕ್ಕೆ ಬೇಕಾದ ಗುರುಗಳ ನೇಮಕವೂವೇಗದ ಗತಿಯಲ್ಲಿ ನಡೆದು, ಶೈಕ್ಷಣಿಕವಾಗಿ ದೊಡ್ಡ ಹೆಜ್ಜೆಯನ್ನಿಡಲಿ. 2021ರಲ್ಲಿ ಈ ಎಲ್ಲಬೆಳವಣಿಗೆಗಳು ಕಂಡು ಜಿಲ್ಲೆಯ ಜನರ ಬದುಕು ಹಸನಾಗಲಿ.