ಬನಹಟ್ಟಿ: ನಿತ್ಯ ಸಾವಿರಾರು ಪ್ರಯಾಣಿಕರನ್ನು ಅವಲಂಬಿಸಿರುವ ಬನಹಟ್ಟಿ ಬಸ್ ನಿಲ್ದಾಣದೊಳಗೆ ಹೊಸ ಕಾಮಗಾರಿ ಎಂಬುದು ಪ್ರಯಾಣಿಕರಿಗೆ ಕಂಟಕವಾಗಿ ಕಾಡುತ್ತಿದೆ.
ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿದ ಗುತ್ತಿಗೆದಾರ, ಬಸ್ ನಿಲ್ದಾಣದಲ್ಲಿ ಕಡಿ ಹಾಕಿ ತಿಂಗಳೇ ಗತಿಸಿದರೂ ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಕಡಿ ಹಾಕಿದ್ದರಿಂದ ಮೋಟಾರ್ ಸೈಕಲ್ ಸವಾರರು ಅಪಘಾತಕ್ಕೀಡಾಗುತ್ತಿದ್ದರೆ, ಜನರು ಬಸ್ ಹತ್ತಲು ಅವಸರದಲ್ಲಿ ಓಡುವ ಸಂದರ್ಭ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಯಾವುದೇ ಕಾಮಗಾರಿ ನಡೆಯದೆ ತೀವ್ರ ನಿರ್ಲಕ್ಷ್ಯ ತೋರಿರುವುದು ಸ್ಥಳೀಯ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಶೌಚಾಲಯ ಬಂದ್: ಕಳೆದ 15 ದಿನಗಳಿಂದ ಟೈಲ್ಸ್ ಹಾಕುವುದಾಗಿ ನೆಪ ಹೇಳುವ ಮೂಲಕ ಶೌಚಾಲಯ ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆ ಪ್ರಯಾಣಿಕರು ಶೌಚಕ್ಕೆ ತೀವ್ರ ಪರದಾಡುವ ಸ್ಥಿತಿ ಎದುರಾಗಿದೆ. ಗುತ್ತಿಗೆ ಪಡೆದು 2 ತಿಂಗಳು ಗತಿಸಿದರೂ ಗುತ್ತಿಗೆದಾರ ಮಾತ್ರ ಒಂದು ದಿನವೂ ಬಸ್ ನಿಲ್ದಾಣದತ್ತ ಸುಳಿಯದೆ ಪ್ರಯಾಣಿಕರು ಗೋಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಾಮಗಾರಿ ಆರಂಭಿಸುವ ಮೂಲಕ ಸಂಚಾರ ಮಾಡುವಲ್ಲಿ ಅವಕಾಶ ಕಲ್ಪಿಸಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಸಂಘಟನೆಗಳು ಎಚ್ಚರಿಸಿವೆ.
Advertisement
ಸುಮಾರು 50 ಲಕ್ಷ ರೂ.ಗಳ ಟೆಂಡರ್‌ನೊಂದಿಗೆ ಸಿಮೆಂಟ್ ರಸ್ತೆ ಕಾಮಗಾರಿಯು ಬಸ್ ನಿಲ್ದಾಣದೊಳಗೆ ಈಗಾಗಲೇ ನಡೆಯಬೇಕಿತ್ತು. ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ದಿನಂಪ್ರತಿ ಸಂಚರಿಸುವ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ಬಂದೊದಗಿದೆ.