Advertisement

ಮಲಪ್ರಭಾ ನಾಲೆ ಕೆಳಭಾಗದಲ್ಲಿ ಜಲಭಾಗ್ಯಕ್ಕೆ ಹೆಜ್ಜೆ

03:27 PM Jul 04, 2020 | Suhan S |

ಹುಬ್ಬಳ್ಳಿ: ಮಲಪ್ರಭಾ ಬಲದಂಡೆ ನಾಲೆ ನಮ್ಮ ಹೊಲಗಳಿಗೆ ಸಂಪರ್ಕ ಹೊಂದಿದೆ ಎಂಬುದು ಬಿಟ್ಟರೆ, ಬಹುತೇಕ ಕೆಳ ಭಾಗದ ರೈತರಿಗೆ ಇದರಿಂದ ನೀರು ಸಿಕ್ಕಿದ್ದೇ ಕಡಿಮೆ. ಒಣ ಕಾಲುವೆ ನೋಡುತ್ತಲೇ ಕೆಳಭಾಗದ ರೈತರು ಪರಿತಪಿಸಬೇಕಾಗಿದೆ. ಈ ನೋವು ಇಲ್ಲವಾಗಿಸಲು ಮೇಲ್ಭಾಗದಲ್ಲಿ ನೀರು ನಿರ್ವಹಣೆ, ಬೆಳೆ ಪದ್ಧತಿ ಇನ್ನಿತರ ವಿಚಾರದ ವಿಶೇಷ ಕಾರ್ಯಯೋಜನೆಯೊಂದು ರೂಪುಗೊಂಡಿದೆ.

Advertisement

ಬಲದಂಡೆ ನಾಲೆಯ ಮೇಲ್ಭಾಗದಲ್ಲಿ ನೀರಿನ ಸಮರ್ಪಕ ನಿರ್ವಹಣೆ ಕೊರತೆ, ಕೆಲವೊಂದು ದುರಸ್ತಿ ಕಾರ್ಯಗಳು ಇಲ್ಲದಿರುವುದು ನೀರು ಪೋಲಾಗುವ ಮೂಲಕ ಕೆಳ ಭಾಗದ ರೈತರಿಗೆ ಕಾಲುವೆ ನೀರು ಮರೀಚಿಕೆಯಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ನಿಗಮ, ವಾಲ್ಮಿ, ಕಾಡ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳು ಒಟ್ಟಾಗಿ ಮಹತ್ವದ ಹೆಜ್ಜೆ ಇರಿಸಿವೆ. ಮಲಪ್ರಭಾ ಬಲದಂಡೆ ನಾಲೆ ಸುಮಾರು 138 ಕಿಮೀ ಉದ್ದ ಇದ್ದು, 58 ಕ್ಯೂಬಿಕ್‌ಮೀಟರ್‌ ನೀರು ಪೂರೈಕೆ ಸಾಮರ್ಥ್ಯ ಹೊಂದಿದೆ. ಈ ನಾಲೆಯಡಿ ಅಂದಾಜು 1,39,921 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಗುರಿ ಹೊಂದಲಾಗಿದೆ.

ಮಲಪ್ರಭಾ ನದಿ ನೀರು ಬಳಸಿಕೊಂಡು ರೇಣುಕಾ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದರಡಿ ಸುಮಾರು 25,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿತ್ತು. ವಾಸ್ತವಿಕವಾಗಿ ಸುಮಾರು 15,000 ಎಕರೆಗೂ ಸಮರ್ಪಕ ನೀರು ದೊರೆಯದಾಗುತ್ತಿದೆ. ಇನ್ನು ಕೆಳಭಾಗದ ರೈತರ ಗೋಳು ಹೇಳತೀರದಾಗಿದೆ. ಇದೆಲ್ಲವುದನ್ನು ಸರಿಪಡಿಸುವ, ಮಲಪ್ರಭಾ ಬಲದಂಡ ನಾಲೆಯ ಕೊನೆ ಭಾಗಕ್ಕೂ ನೀರು ಮುಟ್ಟಿಸುವ ಮೂಲಕ ಅಲ್ಲಿನ ರೈತರ ಮೊಗದಲ್ಲೂ ನಗು ಮೂಡಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

0-40 ಕಿಮೀ ವ್ಯಾಪ್ತಿಯಲ್ಲಿ ಯೋಜನೆ: ಮಲಪ್ರಭಾ ಬಲದಂಡೆ ನಾಲೆಯಲ್ಲಿ ಕೆಳಭಾಗದ ರೈತರಿಗೆ ಕನಿಷ್ಠ ಪ್ರಮಾಣದ ನೀರು ತಲುಪಿಸುವ ಉದ್ದೇಶದೊಂದಿಗೆ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದ್ದು, ವಾಲ್ಮಿ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈಗಾಗಲೇ ರೈತರು, ನೀರು ಬಳಕೆದಾರರ ಸಹಕಾರ ಸಂಘಗಳೊಂದಿಗೆ ಸಮಾಲೋಚನೆ, ಹಳ್ಳಿಗಳಿಗೆ ಭೇಟಿ ಇನ್ನಿತರ ಕಾರ್ಯಗಳು ಆರಂಭಗೊಂಡಿವೆ. ಮಲಪ್ರಭಾ ಬಲದಂಡೆ ನಾಲೆಯ 0 ರಿಂದ 40 ಕಿಮೀ ವರೆಗೆ ನೀರಿನ ಹೆಚ್ಚಿನ ಬಳಕೆ, ನೀರು ಪೋಲಾಗುವುದು, ಬೆಳೆ ಪದ್ಧತಿಯಲ್ಲಿ ಶಿಸ್ತು ಇಲ್ಲದಿರುವುದು ಕಂಡುಬಂದಿದ್ದು, ಆಗಿರುವ ತಪ್ಪು-  ಲೋಪಗಳನ್ನು ಸರಿಪಡಿಸುವ ಕಾರ್ಯವೇ ವಿಶೇಷ ಕಾರ್ಯಯೋಜನೆಯ ಮುಖ್ಯ ಉದ್ದೇಶವಾಗಿದೆ. 0ದಿಂದ 40 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ಮುರಿದಿರುವ ಇಲ್ಲವೆ ಹಾಳಾಗಿರುವ ಕಾಲುವೆ ಗೇಟುಗಳ ದುರಸ್ತಿ, ಕಾಲುವೆಗಳ ರಿಪೇರಿ, ನೀರು ಬಳಕೆದಾರರ ಸಹಕಾರ ಸಂಘಗಳ ಸಕ್ರಿಯತೆ, ಬೆಳೆ ಪದ್ಧತಿ ಬದಲು, ಸಾಧ್ಯವಿದ್ದ ಕಡೆ ಹನಿನೀರಾವರಿ ಬಳಕೆ, ನೀರಿನ ಸಮರ್ಪಕ ಬಳಕೆ ಹಾಗೂ ನಿರ್ವಹಣೆಯಂತಹ ಕ್ರಮಗಳನ್ನು ನೀರು ಬಳಕೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಮಲಪ್ರಭಾ ಬಲದಂಡೆ ಮೇಲ್ಭಾಗದಲ್ಲಿ ನೀರಿನ ಸಮರ್ಪಕ ಬಳಕೆಗಿಂತ ಪೋಲಾಗುವುದೇ ಅಧಿಕವಾಗಿ ರುವುದು ಕೆಳ ಭಾಗಕ್ಕೆ ಸಮರ್ಪಕ ನೀರು ತಲುಪದಿರಲು ಕಾರಣ ಎಂದು ಹೇಳಲಾಗುತ್ತಿದೆ.

ಅನೇಕ ಕಡೆಗಳಲ್ಲಿ ಕಾಲುವೆಗಳ ದುರಸ್ತಿ ಇಲ್ಲದಿರುವುದು, ಗೇಟ್‌ಗಳು ಕಿತ್ತು ಹೋಗಿರುವುದು ಇಲ್ಲವೆ ನೀರು ಬಳಕೆಗೆಂದು ಕಿತ್ತು ಹಾಕಿರುವುದರಿಂದ ನೀರು ಕಾಲುವೆ ಮೂಲಕ ಕೆಳ ಭಾಗಕ್ಕೆ ಹರಿಯುವ ಬದಲು ಎಲ್ಲೆಂದರಲ್ಲಿ ಹರಿಯುತ್ತಿದೆ. ಇನ್ನೊಂದು ಕಡೆ ಹೊಲಗಳಿಗೆ ನೀರನ್ನು ಅಗತ್ಯಕ್ಕಿಂತ ಹೆಚ್ಚಿನ ಬಳಕೆ ಮಾಡಿದ್ದರಿಂದ ಸುಮಾರು 1,000 ಎಕರೆಯಷ್ಟು ಭೂಮಿ ಸವಳು-ಜವಳು ಆಗಿದ್ದು, ಅದನ್ನು ಸರಿಪಡಿಸಬೇಕಾಗಿದೆ. ನೀರಿನ ಸಮರ್ಪಕ ಬಳಕೆ ಇಲ್ಲವಾದರೆ ಏನೆಲ್ಲಾ ಸಮಸ್ಯೆ ಆಗುತ್ತವೆ, ನೀರು ಪೋಲಾಗದೆ ಉಳಿದರೆ ಕೆಳಗಿನ ಭಾಗದ ಅನೇಕ ರೈತರಿಗೆ ನೀರು ನೀಡಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ವಿಶೇಷ ಕಾರ್ಯಯೋಜನೆಯಲ್ಲಿ ಕೈಗೊಳ್ಳಲಾಗುತ್ತಿದೆ.

Advertisement

ರೈತರಲ್ಲಿ ನೆಮ್ಮದಿ ಮೂಡಿಸುವ ಯತ್ನ : ರೇಣುಕಾ ಏತನೀರಾವರಿ ಯೋಜನೆಯಿಂದ ಹೋಗುವ ನೀರು ಮುಂದೆ ಗದಗ ಜಿಲ್ಲೆಗೆ ರೋಣ ತಾಲೂಕಿಗೆ ತಲುಪಬೇಕು. ಅದರ ಬದಲು ಐದು ಗೇಟ್‌ಗಳು ಮುರಿದಿರುವುದರಿಂದ ನಾಲೆ ಬದಲು ವಾಪಸ್‌ ಬಂದು ಮತ್ತೆ ಮಲಪ್ರಭಾ ಜಲಾಶಯ ಸೇರುವಂತಹ ಸ್ಥಿತಿ ಇದೆಯಂತೆ. ಇದನ್ನು ಮೇಲ್ಭಾಗದ ರೈತರಿಗೆ ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ಮನವರಿಕೆ ಮಾಡುವ, ನೀರು ಸಮರ್ಪಕ ಬಳಕೆಗಚ್ಚುವ ಕಾರ್ಯವನ್ನು ಮಾಡುವ ಮೂಲಕ ಕೆಳ ಭಾಗದ ರೈತರಿಗೆ ನೀರು ತಲುಪಿಸುವ ಮಹತ್ವದ ಕಾರ್ಯ ಯಶಸ್ವಿಯಾದಲ್ಲಿ, ನೀರಾವರಿ ಸೌಲಭ್ಯ ಇದ್ದರೂ, ನೀರು ಕಾಣದೆ ಮುಗಿಲು ನೋಡುವ ರೈತರ ಮನದಲ್ಲಿ ಒಂದಿಷ್ಟು ನೆಮ್ಮದಿ ಮೂಡುವಂತಾಗಲಿದೆ.

ಮಲಪ್ರಭಾ ಬಲದಂಡೆ ನಾಲೆಯಲ್ಲಿ ಕೆಳ ಭಾಗದ ರೈತರಿಗೆ ನೀರು ತಲುಪದಿರುವುದು ಸವಾಲಿನ ಕೆಲಸವಾಗಿದೆ. ಸಂಘಟಿತ ಯತ್ನಕ್ಕೆ ಮುಂದಾದರೆ ಖಂಡಿತವಾಗಿಯೂ ಯಶಸ್ಸು ದೊರೆಯಲಿದೆ ಎಂಬ ವಿಶ್ವಾಸವಿದೆ. ರೈತರ  ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರವೂ ಅತ್ಯಂತ ಮುಖ್ಯವಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಒತ್ತು ನೀಡಲಾಗಿದೆ. ಡಾ| ರಾಜೇಂದ್ರ ಪೋದ್ದಾರ, ನಿರ್ದೇಶಕರು, ವಾಲ್ಮಿ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next