ಶಿರ್ವ: ವಿನಾಯಕನಿರುವಾಗ ಸೋಲೇ ಇರುವುದಿಲ್ಲ. ಶಿರ್ವದಲ್ಲಿ ನೆಲೆನಿಂತ ಸಿದ್ಧಿ ವಿನಾಯಕ ದೇವಸ್ಥಾನ ಶಿಲಾಮಯವಾಗಿದ್ದು ಭದ್ರವಾಗಿದೆ. ದೇವಸ್ಥಾನವನ್ನು ಕಟ್ಟಿಸಿಕೊಟ್ಟ ಗ್ಯಾಬ್ರಿಯಲ್ ನಜರೆತ್ ಅವರ ಸಿದ್ಧಿವಿನಾಯಕನ ಸೇವೆಯ ಪ್ರೇರಣೆ ನಮ್ಮ ಸೌಭಾಗ್ಯ ವಾಗಿದ್ದು ಸಮಾಜಕ್ಕೆ ಸಿದ್ಧಿಯನ್ನು ನೀಡುವ ವಿನಾಯಕನಾಗಲಿ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಅವರು ಗುರುವಾರ ಶಿರ್ವದಲ್ಲಿ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಹಿಂದುಗಳಿಗೆ ಕೊಡುಗೆಯಾಗಿ ನೀಡಲು ಕಟ್ಟಿಸಿದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಪಲಿಮಾರು ಮಠಾಧೀಶರ ಮಾರ್ಗದರ್ಶನದಲ್ಲಿ ಜೋತಿಷ ವಿದ್ವಾನ್ ಉಡುಪಿ ಕನ್ನರ್ಪಾಡಿ ವೇ|ಮೂ|ಸಂದೀಪ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶ್ರೀ ಸಿದ್ಧಿ ವಿನಾಯಕನ ಪ್ರತಿಷ್ಠಾಪನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ಬಳಿಕ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಿಸಲು ಸಹಕರಿಸಿದ ಗಣ್ಯರನ್ನು ಗ್ಯಾಬ್ರಿಯಲ್ ನಜರತ್ ಅವರು ಗೌರವಿಸಿ,ದೇವಸ್ಥಾನದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ಶಿರ್ವದ ಗ್ರಾಮಸ್ಥರು ಮತ್ತು ಭಕ್ತಾಧಿಗಳು ಗ್ಯಾಬ್ರಿಯಲ್ ನಜರತ್ ಅವರನ್ನು ಸಮ್ಮಾನಿಸಿದರು.
ಕಾರ್ಯಕ್ರಮಲ್ಲಿ ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು,ದೇವಸ್ಥಾನದ ವಾಸ್ತುಶಿಲ್ಪಿ ಎಂ.ಶ್ರೀನಾಗೇಶ್ ಹೆಗ್ಡೆ ದಂಪತಿ,ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಸಮಾಜಸೇವಕ ಕಾಪು ಲೀಲಾಧರ ಶೆಟ್ಟಿ, ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ರಘುರಾಂ ಭಟ್, ಸತೀಶ್ ಶೆಟ್ಟಿ ಮಲ್ಲಾರ್ ಮತ್ತು ರತ್ನಾಕರ ಕುಕ್ಯಾನ್ ಶಿರ್ವ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಗ್ರಾ.ಪಂ. ಸದಸ್ಯರು,ಭಕ್ತಾಧಿಗಳು ಉಪಸ್ಥಿತರಿದ್ದರು.