Advertisement

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

02:11 AM Jul 06, 2022 | Team Udayavani |

ಮಂಗಳೂರು: ಕರಾವಳಿಯ ಜನರಿಗೆ ಅತೀ ಉಪಯುಕ್ತವಾಗುವ ಮಂಗಳೂರು -ರಾಮೇಶ್ವರ ಮತ್ತು ಮಂಗಳೂರು – ಭಾವ್‌ನಗರ (ಅಹ್ಮದಾಬಾದ್‌) ಹೊಸ ರೈಲು ಸಂಚಾರ ಆರಂಭದ ಪ್ರಸ್ತಾವನೆ ಇತ್ತೀಚೆಗೆ ನಡೆದ ಅಂತರ್‌ ರೈಲ್ವೇ ವಲಯ ವೇಳಾಪಟ್ಟಿ ಸಮ್ಮೇಳನ (ಐಆರ್‌ಟಿಟಿಸಿ)ದಲ್ಲಿ ಅನುಮೋದನೆಗೊಂಡಿದೆ.

Advertisement

ದಕ್ಷಿಣ ರೈಲ್ವೇಯ ರೈಲ್ವೇ ಸಾರಿಗೆ ವಿಭಾಗದ ಚೆನ್ನೈ ಕೇಂದ್ರ ಕಚೇರಿ ನೀಡಿರುವ ಮಾಹಿತಿಯಂತೆ ಮಂಗಳೂರಿನಿಂದ ಭಾವ್‌ನಗರ ಟರ್ಮಿನಸ್‌ ಮತ್ತು ಮಂಗಳೂರಿನಿಂದ ರಾಮೇಶ್ವರಕ್ಕೆ ಸಾಪ್ತಾಹಿಕ ರೈಲು ಸಂಚಾರ ನಡೆಸಲಿದೆ.

ಪ್ರಸ್ತುತ ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್‌ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿರುವ ರೈಲು ನಂ.16511/16512 ಕಣ್ಣೂರು- ಬೆಂಗಳೂರು ಎಕ್ಸ್‌ ಪ್ರಸ್‌ ರೈಲನ್ನು ಕಲ್ಲಿಕೋಟೆಯವರೆಗೆ ವಿಸ್ತರಿಸುವ ಪ್ರಸ್ತಾವವನ್ನು ಕೂಡ ಐಆರ್‌ಟಿಟಿಸಿ ಸಭೆ ಪರಿಶೀಲಿಸಿದ್ದು, ರೈಲ್ವೇ ಮಂಡಳಿಗೆ ಶಿಫಾರಸು ಮಾಡಿದೆ. ಐಆರ್‌ಟಿಟಿಸಿ ಮಾಡುವ ಶಿಫಾರಸುಗಳು ಅನುಷ್ಠಾನಗೊಳ್ಳದೆ ಇರುವುದು ಕಡಿಮೆ. ಹೀಗಾಗಿ ಈ ಎರಡು ನೂತನ ರೈಲುಗಳು ಮೂರು ತಿಂಗಳುಗಳ ಒಳಗೆ ಆರಂಭಗೊಳ್ಳುವ ಸಾಧ್ಯತೆಗಳು ಅಧಿಕ ಎಂದು ಮೂಲಗಳು ತಿಳಿಸಿವೆ.

ಕರಾವಳಿಗರ ಬಹುದಿನಗಳ ಬೇಡಿಕೆ
ರಾಮೇಶ್ವರ, ಮಧುರೈ, ಪಳನಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಕ್ಷೇತ್ರಗಳು. ಕರಾವಳಿಯಿಂದ ಇಲ್ಲಿಗೆ ದಿನಂಪ್ರತಿ ಗಣನೀಯ ಸಂಖ್ಯೆಯ ಯಾತ್ರಾರ್ಥಿಗಳು ತೆರಳುತ್ತಾರೆ. ಪ್ರಸ್ತುತ ಕರಾವಳಿಯಿಂದ ಇಲ್ಲಿಗೆ ನೇರ ರೈಲು ಸಂಚಾರ ಇಲ್ಲ.

ಗುಜರಾತ್‌ ನಿಂದ ವಾಣಿ ಜ್ಯೋದ್ಯಮಿಗಳು, ಕಾರ್ಮಿಕರು ಬಹು ಸಂಖ್ಯೆ ಯಲ್ಲಿ ಬಂದು ಕರಾವಳಿ ಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗುಜರಾತ್‌ಗೆ ಇರುವ ರೈಲುಗಳು ಕೇರಳದಿಂದ ಬರುತ್ತಿದ್ದು, ಸದಾ ಭರ್ತಿಯಾಗಿರುತ್ತವೆ. ಮಂಗಳೂರಿನಿಂದ ಮಂಗಳೂರು ಸೆಂಟ್ರಲ್‌-ಅಹಮದಾಬಾದ್‌ ವಯಾ ಮಡಗಾಂವ್‌ ನೇರ ರೈಲು ಪ್ರಾರಂಭದಿಂದ ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಕಾರವಾರದ ಪ್ರಯಾಣಿಕರಿಗೆ ಪ್ರಯೋಜನ ವಾಗಲಿದೆ. ಇದು ವಸಾಯಿ ಮೂಲಕ ಹೋಗು ವುದರಿಂದ ಪಶ್ಚಿಮ ಮುಂಬಯಿಯಲ್ಲಿ ವಾಸವಿರುವ ಕರಾವಳಿಗರಿಗೂ ಅನುಕೂಲಕರ. ಜತೆಗೆ ಕರಾವಳಿ ಭಾಗದಲ್ಲಿ ಮಡಗಾಂವ್‌ವರೆಗೆ ಇರುವ ಪ್ರಮುಖ ಕೇಂದ್ರಗಳಿಗೆ ತೆರಳುವ ಪ್ರಯಾಣಿಕರಿಗೂ ಉಪಯುಕ್ತ.

Advertisement

ಈಗ ಮಂಗಳೂರಿನಿಂದ ಭಾವ್‌ ನಗರಕ್ಕೆ ರೈಲು ಸಂಚಾರ ಆರಂಭಗೊಳ್ಳುವ ಮೂಲಕ ಇದು ಸಾಕಾರಗೊಳ್ಳಲಿದೆ.

ಮಂಗಳೂರಿನಿಂದ ರಾಮೇಶ್ವರ ಮತ್ತು ಅಹಮದಾಬಾದ್‌ ನಗರಗಳಿಗೆ ರೈಲು ಸಂಚಾರ ಆರಂಭಿಸಬೇಕು ಎಂಬುದಾಗಿ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಂಘ ಹಲವು ಬಾರಿ ಮಾಡಿರುವ ಮನವಿ ಸಾಕಾರಗೊಳ್ಳುವ ಸಮಯ ಸನ್ನಿಹಿತವಾಗಿದೆ.

ಮಂಗಳೂರು ಸಂಸದರು ಕೂಡ ಇದಕ್ಕೆ ಬಹಳಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಹನುಮಂತ ಕಾಮತ್‌ ಸಂತಸ ವ್ಯಕ್ತಪಡಿಸಿದ್ದಾರೆ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರಸ್‌ ರೈಲು ಕಲ್ಲಿಕೋಟೆಯವರೆಗೆ ವಿಸ್ತರಣೆಯಾದರೆ ಮಂಗಳೂರು ಭಾಗದ ಪ್ರಯಾಣಿಕರಿಗೆ ಸೀಟು ರಿಸರ್ವೇಶನ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದನ್ನು ಸಂಸದರ ಗಮನಕ್ಕೆ ತರಲಾಗುವುದು ಎಂದವರು ಹೇಳಿದ್ದಾರೆ.

ಉದಯವಾಣಿ ಗಮನ ಸೆಳೆದಿತ್ತು
ಮಂಗಳೂರು- ರಾಮೇಶ್ವರ ವಯಾ ಮಧುರೈ; ಮಂಗಳೂರು ಸೆಂಟ್ರಲ್‌- ಅಹ್ಮದಾಬಾದ್‌ ವಯಾ ಮಡಗಾಂವ್‌, ಮಂಗಳೂರು ಸೆಂಟ್ರಲ್‌- ತಿರುಪತಿ ವಯಾ ಹಾಸನ- ಬೆಂಗಳೂರು ಹಾಗೂ ಮಂಗಳೂರು- ಅಯೋಧ್ಯೆ ಸೇರಿದಂತೆ ಕರಾವಳಿಗೆ ಅತೀ ಉಪಯುಕ್ತವಾಗಲಿರುವ ಹೊಸ ರೈಲುಗಳ ಸಂಚಾರದ ಬಹುದಿನಗಳ ಬೇಡಿಕೆ ಈಡೇರದಿರುವ ಬಗ್ಗೆ ಮೇ 12ರಂದು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಮಂಗಳೂರಿನಿಂದ ರಾಮೇಶ್ವರ ಮತ್ತು ಅಹ್ಮದಾಬಾದ್‌ಗೆ ರೈಲು ಸಂಚಾರ ಆರಂಭಿಸ ಬೇಕು ಎಂದು ನಾನು ದಕ್ಷಿಣ ರೈಲ್ವೇ ಮತ್ತು ರೈಲ್ವೇ ಸಚಿವರನ್ನು ಕೋರಿದ್ದೆ. ಈಗ ಐಆರ್‌ಟಿಟಿಸಿ ಸಭೆಯಲ್ಲಿ ಇದು ಅನುಮೋದನೆ ಗೊಂಡಿದ್ದು, ರೈಲ್ವೇ ಮಂಡಳಿಗೆ ಸಲ್ಲಿಕೆಯಾಗಿದೆ.
-ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

ವೇಳಾಪಟ್ಟಿ ಬದಲು?
ನಂ. 16346 ತಿರುವನಂತಪುರ-ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಬದಲಾವಣೆ ಮತ್ತು 12620/12619 ಮಂಗಳೂರು-ಮತ್ಸ್ಯಗಂಧ ರೈಲು ನಡುವೆ ರೇಕ್‌ ಹಂಚಿಕೆ ಪ್ರಸ್ತಾವನೆ ಅನುಮೋದನೆಗೊಂಡಿದೆ. ಪ್ರಸ್ತುತ ಮುಂಬಯಿಯಿಂದ ಬೆಳಗ್ಗೆ ಬರುವ ಮತ್ಸ್ಯಗಂಧ ರೈಲು ಮಂಗಳೂರು-ತಿರುವನಂತಪುರ ರೈಲು ಆಗಿ ಸಂಚರಿಸುತ್ತದೆ. ತಿರುವನಂತಪುರದಿಂದ ಬೆಳಗ್ಗೆ ಬರುವ ರೈಲು ಅಪರಾಹ್ನ 2.30ಕ್ಕೆ ಮತ್ಸ್ಯಗಂಧ ರೈಲು ಆಗಿ ಮುಂಬಯಿಗೆ ತೆರಳುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಒಂದು ರೇಕ್‌ ಬೇಕಾಗುತ್ತದೆ. ಇದನ್ನು ನಿವಾರಿಸಲು ಇನ್ನು ಮುಂದೆ ರೇಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ಮತ್ತು ಮತ್ಸ್ಯಗಂಧ ನಡುವೆ ಹಂಚಿಕೆಯಾಗಲಿದೆ.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next