Advertisement

ನೆಲ್ಯಾಡಿ ಹಳೆ ಬಸ್‌ ನಿಲ್ದಾಣಕ್ಕೆ ಹೊಸರೂಪ

11:11 PM Mar 03, 2021 | Team Udayavani |

ಉಪ್ಪಿನಂಗಡಿ: ನೆಲ್ಯಾಡಿ ಹಳೇ ಬಸ್‌ ನಿಲ್ದಾಣಕ್ಕೆ ಹೊಸರೂಪ ನೀಡಲಾಗುತ್ತಿದೆ. ಇಲ್ಲಿನ ಬಸ್‌ ನಿಲ್ದಾಣವು 20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ತಾಗಿಕೊಂಡ ಇರುವ ಇದು ಕರ್ನಾಟಕ ಸಾರಿಗೆ ಸಂಸ್ಥೆಯ ಸ್ವಂತ ನಿಲ್ದಾಣವಾಗಿದೆ. ಆರಂಭದಿಂದಲೂ ಬಹುತೇಕ ಬಸ್‌ ನಿಲ್ದಾಣಕ್ಕೆ ಬಾರದೆ ಇದ್ದುದರಿಂದ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿರಲಿಲ್ಲ. ಕೇವಲ 12 ಗಂಟೆಗಳ ಕಾಲ ಬಸ್ಸು ನಿಯಂತ್ರಕರು ಓರ್ವರೇ ಕರ್ತವ್ಯ ನಿಭಾಯಿಸುತ್ತಿದ್ದರು. ಇದೀಗ ಕಾಮಗಾರಿ ಆರಂಭಿಸಲಾಗಿದೆ.

Advertisement

ಕೆಲವು ದಿನಗಳ ಹಿಂದೆ ಈ ನಿವೇಶನದ ಪಕ್ಕದಲ್ಲೆ ಪೊಲೀಸ್‌ ಠಾಣೆಗೆ ನಿವೇಶನದ ಗಡಿ ಗುರುತಿಸುವ ವೇಳೆ ಸಾರ್ವಜನಿಕ ರಸ್ತೆಯ ತಕರಾರು ಬಂದಾಗ ನಿಗಮದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗಲೇ ವಾಸ್ತವಾಂಶ ಬೆಳಕಿಗೆ ಬಂತು. ಒಂದು ಎಕ್ರೆಗೂ ಮಿಕ್ಕ ನಿರ್ವೇಶನವಿದ್ದು, ಸಾರಿಗೆ ಸಂಸ್ಥೆಯ ವರಿಷ್ಠಾಧಿಕಾರಿಗಳು ಸುತ್ತಲೂ ತಂತಿಬೇಲಿ, ಕಟ್ಟಡದ ಛಾವಣಿ ದುರಸ್ತಿ, ಶೌಚಾಲಯ ನಿರ್ಮಾಣ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ಸಹಿತ ನಿಲ್ದಾಣದ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವಂತೆ ಸೂಚಿಸಿದ್ದರು.

ಅದರಂತೆ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ಇದೀಗ 67 ಬಸ್‌ಗಳಿಗೆ ನಿಲ್ದಾಣಕ್ಕೆ ಬಂದು ಹೋಗುವಂತೆ ಸೂಚಿಸಲಾಗಿದೆ. ಇಲ್ಲಿನ ಅವ್ಯವಸ್ಥೆ ಕುರಿತು ಉದಯವಾಣಿ ಸುದಿನ ಸಚಿತ್ರ ವರದಿ ಪ್ರಕಟಿಸಿತ್ತು.

ಶೀಘ್ರ ಸೇವೆಗೆ ಲಭ್ಯ
ಸಂಸ್ಥೆಯ ವರಿಷ್ಠಾಧಿಕಾರಿಗಳ ನಿರ್ದೇಶ ನದಂತೆ ಕಟ್ಟಡದ ಛಾವಣಿ, ನಿವೇಶನಕ್ಕೆ ಸುತ್ತಲೂ ತಂತಿಬೇಲಿ ಸಹಿತ ಮೂಲ ಸೌಕರ್ಯಗಳಿಗೆ ಆದ್ಯತೆಯಲ್ಲಿ ನಡೆಸಲಾಗುತ್ತಿದೆ. ಎಂಟು ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ಎಂದು ವಿಭಾಗಿಯ ಕಿರಿಯ ಅಭಿಯಂತ ಶರತ್‌ ತಿಳಿಸಿದ್ದಾರೆ.

ಸಿಟಿ ಬಸ್‌ಗೆ ಬೇಡಿಕೆ
ಕಡಬ ತಾ| ಕೇಂದ್ರವಾಗಿ ಪರಿವರ್ತನೆಯಾದ ಬೆನ್ನಲ್ಲೇ ನೆಲ್ಯಾಡಿ-ಕಡಬ ಸಿಟಿ ಬಸ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಆರಂಭಿಸಿದಲ್ಲಿ ಅನುಕೂಲವಾಗುತ್ತದೆ. ಈ ಕುರಿತು ನಿಗಮದ ಅಧಿಕಾರಿಗಳಲ್ಲಿ ಮನವರಿಕೆ ಮಾಡಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ.
-ಸರ್ವೋತ್ತಮ ಗೌಡ,ಜಿ.ಪಂ. ಸದಸ್ಯ

Advertisement

ಅನಿವಾರ್ಯವಾದರೆ ನೇಮಕ
ನೆಲ್ಯಾಡಿ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ, ಈಗಾಗಲೇ ಆ ವ್ಯಾಪ್ತಿಯಲ್ಲಿ ಓಡಾಟ ನಡೆಸುತ್ತಿರುವ ಬಹುತೇಕ ಬಸ್‌ಗಳು ತಂಗುದಾಣಕ್ಕೆ ಬಂದು ಹೋಗುವಂತೆ ಸೂಚಿಸಿದ್ದೇನೆ. ಆದರೆ ಸಾರಿಗೆ ನಿಯಂತ್ರಕರ ಹುದ್ದೆ ಕೊರತೆ ಇದೆ. ಅನಿವಾರ್ಯತೆ ಕಂಡು ಬಂದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಈಗ ಹಗಲು ಸಮಯಕ್ಕೆ ಮಾತ್ರ ನಿಯಂತ್ರಣಾಧಿಕಾರಿಯನ್ನು ನೇಮಿಸಲಾಗಿದೆ.
-ಜಯಕರ ಶೆಟ್ಟಿ,ವಿಭಾಗೀಯ ಹಿರಿಯ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next