ಮಂಗಳೂರು: ಶೇಣಿ ಅವರು ತಮ್ಮ ಪಾತ್ರಗಳಿಗೆ ಹೊಸ ಆಯಾಮವನ್ನು ಕೊಟ್ಟವರು, ಯಕ್ಷಗಾನದಲ್ಲಿ ಹೊಸ ಚಿಂತನೆಯನ್ನು ಆರಂಭಿಸಿ ಪ್ರಸಿದ್ಧರಾದವರು ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ರವಿವಾರ ಹಮ್ಮಿಕೊಂಡ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಕ್ಷಗಾನ ರಂಗದಲ್ಲಿ ಇತಿಹಾಸ ಸೃಷ್ಟಿಸಿದ ಬೆರಳೆಣಿಕೆಯ ಕಲಾವಿದರಲ್ಲಿ ಶೇಣಿಯವರೂ ಒಬ್ಬರು, ಅವರ ಸಂಸ್ಮರಣೆಯ ಮೂಲಕ ಯಕ್ಷಲೋಕಕ್ಕೆ ಹೊಸತನ ನೀಡುವ ಕೆಲಸ ಆಗುತ್ತಲೇ ಇರಬೇಕು ಎಂದವರು ಹೇಳಿದರು.
ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಶೇಣಿಯವರು ತಮ್ಮ ವಿಶಿಷ್ಟ ವಾಗ್ಝರಿಯ ಮೂಲಕ ಗುರುತಾದವರು. ತಾನು ನಿರ್ವಹಿಸುತ್ತಿದ್ದ ಪಾತ್ರಗಳ ಮೂಲಕ ಇಡೀ ಬದುಕಿಗೆ ಬೇಕಾದ ಚಿಂತನೆಗಳನ್ನು ಮೂಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ನಿವೃತ್ತ ಉಪನ್ಯಾಸಕ, ಶೇಣಿ ರಾಮಾಯಣ, ಶೇಣಿ ಮಹಾಭಾರತ ಕೃತಿಗಳನ್ನು ರಚಿಸಿದ ಡಾ| ಜಿ.ಎಲ್. ಹೆಗಡೆ ಅವರಿಗೆ ಶೇಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಅಭಿನಂದನ ಭಾಷಣ ಮಾಡಿದರು.
ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ, ಸಂಘಟನ ಕಾರ್ಯದರ್ಶಿ ಜಿ.ಕೆ. ಭಟ್ ಸೇರಾಜೆ, ವಿಶ್ವಸ್ತ ಮಧುಸೂದನ ಆಯಾರ್
ಮುಂತಾದವರಿದ್ದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಪಿ.ವಿ. ರಾವ್ ಕಾರ್ಯಕ್ರಮ ನಿರೂಪಿಸಿದರು.