ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್-ಎ-ಮುಹಮ್ಮದ್ ಉಗ್ರ ಸಂಘಟನೆಗಳು ಪಾಕಿಸ್ತಾನದ ಅಬೋಟಾಬಾದ್‌ನ ಸೇನೆ ಮತ್ತು ಗುಪ್ತಚರ ಸಮುದಾಯದ ಕ್ಯಾಂಪಸ್ ಪಕ್ಕದಲ್ಲೇ ಉಗ್ರ ತರಬೇತಿ ಕೇಂದ್ರಗಳನ್ನು ತೆರೆದಿರುವ ಮಾಹಿತಿ ಬಹಿರಂಗವಾಗಿದೆ.
ಇದೇ ಅಬೋಟಾಬಾದ್‌ನಲ್ಲಿ ಅಲ್‌ಖೈದಾ ಉಗ್ರ ನಾಯಕ ಒಸಾಮ ಬಿನ್ ಲಾಡೆನ್ ಅಡಗಿದ್ದ. ಇಲ್ಲೇ ಆತನನ್ನು ಅಮೆರಿಕವು 2011ರಲ್ಲಿ ಹತ್ಯೆಗೈದಿತ್ತು.
ಉಗ್ರ ತರಬೇತಿ ಕೇಂದ್ರವು ಸೇನಾ ಪ್ರದೇಶದ ವ್ಯಾಪ್ತಿಯಲ್ಲಿ ಇರುವುದರಿಂದ ಹೊರಗಿನ ಯಾವುದೇ ವ್ಯಕ್ತಿಯು ಅನುಮತಿ ಇಲ್ಲದೇ ಒಳ ಹೋಗುವುದು ಸಾಧ್ಯವೇ ಇಲ್ಲ ಎನ್ನಲಾಗಿದೆ. ಇನ್ನೂ ಆತಂಕದ ಸಂಗತಿ ಎಂದರೆ, ಈ ಉಗ್ರರ ತರಬೇತಿ ಮೇಲುಸ್ತುವಾರಿಯನ್ನು ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ನೋಡಿಕೊಳ್ಳುತ್ತಿದೆ. ಇಲ್ಲಿ, ಪುರುಷರು ಮತ್ತು ಮಹಿಳೆಯರಿಗೆ ಶಸ್ತ್ರಾಸ್ತ್ರಗಳ ನಿರ್ವಹಣೆ ಸೇರಿದಂತೆ ಯುದ್ಧ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಈ ಉಗ್ರ ತರಬೇತಿ ಶಿಬಿರವನ್ನು ಒಸಾಮ ಬಿನ್ ಲಾಡೆನ್ ಬಳಸುತ್ತಿದ್ದ ಸುರಕ್ಷಿತ ಮನೆ ಇದ್ದ ಸ್ಥಳದಲ್ಲೇ ನಿರ್ಮಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇದು ಉಗ್ರ ನಾಯಕರಾದ ಹಫೀಜ್ ಸಯೀದ್, ಸೈಯದ್ ಸಲಾವುದ್ದೀನ್ ಮತ್ತು ಮಸೂದ್ ಅಜರ್ ಮತ್ತಿತರರ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ಭಯೋತ್ಪಾದನಾ ತರಬೇತಿ ಕೇಂದ್ರವಾಗಿದೆ ಎನ್ನಲಾಗುತ್ತಿದೆ.