ವಾಷಿಂಗ್ಟನ್ : ಊಹಿಸಲಾಗದ ತಾಪಮಾನವನ್ನು ಹೊಂದಿರುವ ಸೂರ್ಯನ ಮೇಲ್ಮೈನಲ್ಲಿ ಏನಿದೆ ಎಂಬುದರ ಬಗೆಗಿನ ಕೌತುಕಕ್ಕೆ ಸದ್ಯದಲ್ಲೇ ಉತ್ತರ ದೊರೆಯುವ ಸಾಧ್ಯತೆಯಿದೆ. ಹವಾಯಿ ದ್ವೀಪದಲ್ಲಿ ಅಳವಡಿಸಲಾಗಿರುವ ‘ಇನೋಯೆ ಸೋಲಾರ್ ಟೆಲಿಸ್ಕೋಪ್’ ಇದೇ ಮೊದಲ ಬಾರಿಗೆ ಸೂರ್ಯನ ಮೇಲ್ಮೆ„ನ ಅತ್ಯಂತ ಅಪರೂಪದ ಛಾಯಾಚಿತ್ರಗಳನ್ನು ಸೆರೆ ಹಿಡಿದಿದೆ.
ಸೂರ್ಯನ ಮೇಲ್ಮೈ ಅಧ್ಯಯನ, ಅಲ್ಲಿನ ವಾತಾವರಣದ ಕುರಿತು ಮಾಹಿತಿ ಮತ್ತು ಅದರಿಂದ ಭೂಮಿ ಸೇರಿ ವಿಶ್ವದ ಮೇಲೆ ಉಂಟಾಗಬಹುದಾದ ಪ್ರಭಾವ, ಬಾಹ್ಯಾಕಾಶದಲ್ಲಿನ ಸ್ಥಿತಿಗತಿಗಳ ಮೇಲೆ ಮತ್ತಷ್ಟು ವಿಸ್ತೃತ ಅಧ್ಯಯನಕ್ಕೆ ಇದು ನೆರವಾಗಲಿದೆ ಎಂದು ಅಮೆರಿಕದ ನ್ಯಾಶನಲ್ ಸೈನ್ಸ್ ಫೌಂಡೇಶನ್ ಸಂಶೋಧಕರು ಹೇಳಿದ್ದಾರೆ.
ಸೂರ್ಯನಲ್ಲಿನ ಚಟುವಟಿಕೆಗಳು ಭೂಮಿಯ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಬಹುದಾಗಿದೆ. ಟೆಲಿಸ್ಕೋಪ್ ಸೆರೆಹಿಡಿದ ಫೋಟೋಗಳಲ್ಲಿ ಸೂರ್ಯನನ್ನು ಆವರಿಸಿಕೊಂಡ ಅತ್ಯಂತ ತಾಪಮಾನದಿಂದ ಕೂಡಿದ ಪ್ರದೇಶ ಕಾಣಸಿಗುತ್ತದೆ. ಅದರಲ್ಲಿ ಕೋಶಗಳಂಥ ರಚನೆಗಳಿವೆ.
ಎನ್‌ಎಸ್‌ಎಫ್ ನಿರ್ದೇಶಕ ಫ್ರಾನ್ಸ್ ಕೊರ್ಡೋವಾ ನೀಡಿದ ಮಾಹಿತಿ ಪ್ರಕಾರ, ಟೆಲಿಸ್ಕೋಪ್ ಸೂರ್ಯನ ಪ್ರಭಾವಲಯದ ವ್ಯಾಪ್ತಿಯಲ್ಲಿರುವ ಅಯಸ್ಕಾಂತೀಯ ಕ್ಷೇತ್ರಗಳನ್ನು ಕೂಡ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಅಲ್ಲಿಂದ ಹೊರಹೊಮ್ಮುವ ಸೌರ ಜ್ವಾಲೆ ಭೂಮಿಯ ಮೇಲಿನ ಜೀವ ವೈವಿಧ್ಯದ ಮೇಲೆ ಪ್ರಭಾವ ಬೀರಲಿದೆ ಎಂದಿದ್ದಾರೆ.
ಸೂರ್ಯನಲ್ಲಿನ ಅಯಸ್ಕಾಂತೀಯ ವಲಯಗಳಿಂದ ಹೊರಹೊಮ್ಮುವ ಸೌರ ಬಿರುಗಾಳಿ ತಾಂತ್ರಿಕತೆಯನ್ನೇ ಆಧರಿಸಿರುವ ಆಧುನಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.