Advertisement

ಮುಂಗಾರು ಮುಂಜಾಗ್ರತೆ : ಮೆಸ್ಕಾಂನಿಂದ 835 ಮಂದಿಯ ವಿಶೇಷ ಪಡೆ

10:13 AM Jun 28, 2019 | keerthan |

ಮಂಗಳೂರು: ಕಳೆದ 5 ವರ್ಷಗಳಲ್ಲಿ ವಿದ್ಯುತ್‌ ಅವಘಡದಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ 9 ಪ್ರಾಣಹಾನಿ ಸಂಭವಿಸಿದ್ದು, 35 ಲಕ್ಷ ರೂ.ಗೂ ಹೆಚ್ಚಿನ ಪರಿಹಾರ ನೀಡಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೆಸ್ಕಾಂ 835 ಮಂದಿಯ ಪಡೆ ಮತ್ತು 39 ವಾಹನಗಳನ್ನು ನಿಯೋಜಿಸಿದೆ.
ಗಾಳಿ ಮಳೆಯ ಅಬ್ಬರದಿಂದ ಕಳೆದ ವರ್ಷ ಮೆಸ್ಕಾಂಗೆ ದ.ಕ. ಜಿಲ್ಲೆಯಲ್ಲಿ 6.28 ಕೋಟಿ ರೂ., ಉಡುಪಿಯಲ್ಲಿ 3.36 ಕೋಟಿ ರೂ., ಶಿವಮೊಗ್ಗದಲ್ಲಿ 2.56 ಕೋಟಿ ರೂ., ಚಿಕ್ಕಮಗಳೂರಿನಲ್ಲಿ 2.86 ಕೋಟಿ ರೂ. ಮೌಲ್ಯದ
ನಷ್ಟ ಸಂಭವಿಸಿತ್ತು. ಈ ಬಾರಿ ಹಾನಿ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶೇಷ ಪಡೆ ನೇಮಕ ಮಾಡಲಾಗಿದೆ.

Advertisement

ಮಂಗಳೂರು ವಿಭಾಗ-2ರಲ್ಲಿ 60 ಮಂದಿಯ ವಿಶೇಷ ಪಡೆ ರಚಿಸಲಾಗಿದ್ದು, 6 ವಾಹನ ನೀಡಲಾ ಗಿದೆ. ಪುತ್ತೂರು ವಿಭಾಗದಲ್ಲಿ 68 ಮಂದಿ – 4 ವಾಹನ, ಬಂಟ್ವಾಳದಲ್ಲಿ 90 ಮಂದಿ – 5 ವಾಹನ, ಉಡುಪಿ ವಿಭಾಗದಲ್ಲಿ 130 ಮಂದಿ – 7 ವಾಹನ, ಕುಂದಾಪುರದಲ್ಲಿ 77 ಮಂದಿ, ಶಿವಮೊಗ್ಗದಲ್ಲಿ 61 ಮಂದಿ – 2 ವಾಹನ, ಶಿಕಾರಿಪುರ ವಿಭಾಗದಲ್ಲಿ 50 ಮಂದಿ – 2 ವಾಹನ, ಭದ್ರಾವತಿಯಲ್ಲಿ 34 ಮಂದಿ, ಸಾಗರದಲ್ಲಿ 80 ಮಂದಿ – 3 ವಾಹನ, ಚಿಕ್ಕಮಗಳೂರಿನಲ್ಲಿ 80 ಮಂದಿ – 4 ವಾಹನ, ಕೊಪ್ಪದಲ್ಲಿ 80 ಮಂದಿ – 3 ವಾಹನ, ಕಡೂರಿನಲ್ಲಿ 25 ಮಂದಿ – 3 ವಾಹನ ಒದಗಿಸಲಾಗಿದೆ.

ಸೇವಾ ಕೇಂದ್ರ
24 ಗಂಟೆಗಳ ಸೇವೆಗಾಗಿ ಪ್ರತೀ ವಿಭಾಗದಲ್ಲೂ ಸೇವಾಕೇಂದ್ರ ತೆರೆದಿರುವುದಲ್ಲದೆ, ಮೊಬೈಲ್‌ ಸೇವಾ ವ್ಯಾನ್‌ಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ ವಿದ್ಯುತ್‌ ಕಂಬ, ತಂತಿ ಸಂಗ್ರಹ ಮಾಡಲಾಗಿದ್ದು, ಪ್ರತಿಯೊಂದು ಉಪ ವಿಭಾಗಗಳಲ್ಲಿಯೂ ಹೆಚ್ಚುವರಿ ವಿದ್ಯುತ್‌ ಪರಿವರ್ತಕಗಳನ್ನು ದಾಸ್ತಾನು ಇಡಲಾಗಿದೆ.  ವಿದ್ಯುತ್‌ ಸಂಬಂಧಿತ ದೂರು, ಸಹಾಯಕ್ಕಾಗಿ ಈಗಾಗಲೇ ಉಚಿತ ದೂರವಾಣಿ ಸಂಖ್ಯೆ 1912  ಇದ್ದು, ಈ ಲೈನ್‌ಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ
*ವಿದ್ಯುತ್‌ ತಂತಿ ಸಮೀಪ ಬಟ್ಟೆ ಒಣಗಲು ಹಾಕದಿರಿ
* ವಾಹನ ಚಾಲನೆ ವೇಳೆ ವಿದ್ಯುತ್‌ ತಂತಿ ಹಾದು ಹೋಗಿರುವುದನ್ನು ಗಮನಿಸಿ
*ವಿದ್ಯುತ್‌ ತಂತಿಗೆ ತಾಗಿಕೊಂಡಿರುವ ಮರ-ಗಿಡಗಳನ್ನು ಹತ್ತಬೇಡಿ
* ಮಕ್ಕಳು ವಿದ್ಯುತ್‌ ಕಂಬದ ಬಳಿ ಹೋಗದಂತೆ ನೋಡಿಕೊಳ್ಳಿ
* ತಂತಿ ಕಡಿದು ಬಿದ್ದಿದ್ದರೆ ಮುಟ್ಟಬೇಡಿ

2015ರಲ್ಲಿ ಪುತ್ತೂರಿನ ಚಂದ್ರು, ಕೌಶಿಕ್‌, 2016ರಲ್ಲಿ ಪುತ್ತೂರಿನ ದಿವ್ಯಲತಾ, ಸುಳ್ಯದ ಹೊನ್ನಪ್ಪ ಗೌಡ, 2017ರಲ್ಲಿ ಬಂಟ್ವಾಳದ ಯೋಗೀಶ್‌ ಪೂಜಾರಿ, 2018ರಲ್ಲಿ ಮಂಗಳೂರಿನ ಅಶೋಕ್‌ ಡಿ’ಸೋಜಾ, ಕಾವೂರಿನ ಕಮಲಮ್ಮ, 2019ರಲ್ಲಿ ಬೆಳ್ತಂಗಡಿಯ ಸಂಜೀವ ಮೂಲ್ಯ ಮೃತಪಟ್ಟಿದ್ದರು.

Advertisement

ಮುಂಗಾರು ಎದುರಿಸಲು ಸಿದ್ಧ
ಮುಂಗಾರು ಎದುರಿಸಲು ಮೆಸ್ಕಾಂ ಸಿದ್ಧವಾಗಿದ್ದು, ಅಪಾಯಕಾರಿ ರೆಂಬೆಗಳನ್ನು ತೆರವು ಮಾಡಲಾಗಿದೆ. ತುರ್ತು ಅಗತ್ಯಕ್ಕೆಂದು ಹೆಚ್ಚುವರಿ ತಂಡಗಳನ್ನು ನಿಯೋಜಿಸಿದ್ದು, 1912 ಸಹಾಯವಾಣಿ ಹೆಚ್ಚುವರಿ ಲೈನ್‌ ತೆರೆಯಲಾಗಿದೆ. ವಿದ್ಯುತ್‌ ಅವಘಡ ತಪ್ಪಿಸಲು ಸಾರ್ವಜನಿಕರು ಕೂಡ ಮುಂಜಾಗ್ರತೆ ವಹಿಸಬೇಕು.
ಸ್ನೇಹಲ್‌, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next