ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ಕರಡು ಅಧಿಸೂಚನೆ ಪ್ರಕಟಿಸಿದ್ದು ಹತ್ತು ವರ್ಷಕ್ಕಿಂತ ಹೆಚ್ಚು ಸಮಯ ಮಹಾನಗರ ವ್ಯಾಪ್ತಿಯಲ್ಲಿ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ಅನ್ವಯ ಹೊಸ ನಿಯಮಗಳನ್ನು ರೂಪಿಸಿದೆ. ಅದರ ಆಧಾರದಲ್ಲಿಯೇ ಶಿಕ್ಷಕರ ಸಾಮಾನ್ಯ ವರ್ಗಾವಣೆ ಮಾಡಲು ಮುಂದಾಗಿದೆ.
ಇದುವರೆಗೂ ಸಾಮಾನ್ಯ ವರ್ಗಾವಣೆ ನಿಯಮದ ಪ್ರಕಾರ ಶೇ.8ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. ಹೊಸ ಕಾನೂನು ಪ್ರಕಾರ ಶೇ.15ರ ವರೆಗೂ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎ ವಲಯದಲ್ಲಿ (ಮಹಾನಗರ ಪಾಲಿಕೆ ವ್ಯಾಪ್ತಿ) ದೀರ್ಘ ಸೇವೆ ಸಲ್ಲಿಸಿದವರನ್ನು ಸಿ ವಲಯ (ಗ್ರಾಮಾಂತರ ಪ್ರದೇಶ)ಕ್ಕೆ ವರ್ಗಾಯಿಸಲಾಗುತ್ತದೆ. ಸಿ ವಲಯದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಎ ವಲಯಕ್ಕೆ ವರ್ಗಾಯಿಸಲಾಗುತ್ತದೆ. ಅದೇ ರೀತಿ ಬಿ ವಲಯದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಎ ವಲಯಕ್ಕೆ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ಕಾಯ್ದೆ ನಿಯಮ 4 ಪ್ರಕಾರ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಎ ವಲಯದಿಂದ ಬಿ ವಲಯಕ್ಕೆ ಬಿ ವಲಯದಿಂದ ಸಿ ವಲಯಕ್ಕೆ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಅಂಗವಿಕಲರು, ಅನಾರೋಗ್ಯ ಕಾರಣಕ್ಕೆ ವರ್ಗಾವಣೆ ಬಯಸುವವರು, ಪತಿ ಪತ್ನಿ ವರ್ಗಾವಣೆ, ವಿಧವೆ ಹಾಗೂ ವಿಧುರರ ವರ್ಗಾವಣೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಹೊಸ ನಿಯಮದ ಪ್ರಕಾರ ಪಟ್ಟಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮಹಾನಗರ ವ್ಯಾಪ್ತಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಎ ಮತ್ತು ಬಿ ಅಂದರೆ ಪಟ್ಟಣ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ವರ್ಗಾವಣೆ ಪಡೆಯಲು ಅವಕಾಶ ಒದಗಿಸಲಾಗಿದೆ.
ಹೊಸ ವರ್ಗಾವಣೆ ಕರಡಿನ ಕುರಿತು ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ನಂತರ ಹೊಸ ನಿಯಮಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಹಾಗೆಯೇ ಸೆ.20 ರಿಂದ ವರ್ಗಾವಣೆಗೆ ಅರ್ಜಿ ಆಹ್ವಾನಿಸಿ ನವೆಂಬರ್ ವೇಳೆಗೆ ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.