Advertisement

ಆ. 15: ಕಡಬ, ಮೂಡಬಿದಿರೆ ತಾ|ಕಾರ್ಯಾರಂಭ 

11:24 AM Aug 03, 2018 | Karthik A |

ಮಂಗಳೂರು: ನೂತನ ಮೂಡಬಿದಿರೆ ಮತ್ತು ಕಡಬ ತಾಲೂಕುಗಳು ಈ ವರ್ಷದ ಸ್ವಾತಂತ್ರ್ಯೋತ್ಸವದಂದು ಅಧಿಕೃತ ಕಾರ್ಯಾಚರಣೆ ಆರಂಭಿಸಲಿವೆ. ಆ. 15ರಂದು ಮಧ್ಯಾಹ್ನ 12ಕ್ಕೆ ಕಡಬ ಮತ್ತು ಸಂಜೆ 4 ಗಂಟೆಗೆ ಮೂಡಬಿದಿರೆ ತಾಲೂಕು ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಎರಡೂ ತಾಲೂಕುಗಳಲ್ಲಿ ಆಡಳಿತ ವ್ಯವಸ್ಥೆ ಅಂದು ಆರಂಭವಾಗಲಿವೆ. ಮುಂದೆ ಹಂತ ಹಂತವಾಗಿ ಸೇವಾ ವ್ಯವಸ್ಥೆಗಳನ್ನು ನೀಡಲಾಗುವುದು. ಮೂಡಬಿದಿರೆ ಮತ್ತು ಕಡಬದ ಜನತೆ ತಮ್ಮ ಕೆಲಸಗಳಿಗಾಗಿ ಮಂಗಳೂರು ಅಥವಾ ಸನಿಹದ ತಾಲೂಕುಗಳಿಗೆ ಓಡಾಡುವುದು ತಪ್ಪಲಿದೆ ಎಂದರು.

Advertisement

ಸೆ. 15ರವರೆಗೆ ಅವಕಾಶ
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇ. 40ರಷ್ಟು ಹೆಚ್ಚು ಮಳೆಯಾಗಿದೆ. ಪ್ರಾಕೃತಿಕ ವಿಕೋಪದಿಂದಾಗಿ ಒಟ್ಟು 11 ಜೀವಹಾನಿ ಸಂಭವಿಸಿದ್ದು, 9 ಮಂದಿಯ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳಂತೆ ಒಟ್ಟು 45 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. 1,014 ವಾಸದ ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ 122.60 ಲಕ್ಷ ರೂ. ಪರಿಹಾರ ಹಂಚಲಾಗಿದೆ. 252.07 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 19 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಹಕ್ಕುಪತ್ರ ನೀಡುವ ಕಾರ್ಯವೂ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. 94ಸಿಯಡಿ ಒಟ್ಟು 95,714 ಅರ್ಜಿಗಳು ಸ್ವೀಕಾರವಾಗಿದ್ದು, 81,077 ಅರ್ಜಿ ವಿಲೇವಾರಿಯಾಗಿವೆ. 94ಸಿಸಿಯಡಿ 53,650 ಸ್ವೀಕೃತ ಅರ್ಜಿಗಳ ಪೈಕಿ 24,559 ಅರ್ಜಿ ವಿಲೇವಾರಿಗೊಂಡಿವೆ. ಸೆ. 15ರೊಳಗೆ ಈ ಎರಡೂ ಯೋಜನೆಗಳಡಿ ಅರ್ಜಿ ಸ್ವೀಕರಿಸಲು ಅವಕಾಶವಿದೆ ಎಂದು ಖಾದರ್‌ ತಿಳಿಸಿದರು.

ನಿವೇಶನರಹಿತರ ಸಭೆ
ನಿವೇಶನರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಈಗಾಗಲೇ ಎರಡು ವರ್ಷಗಳಲ್ಲಿ 1,243 ಎಕರೆ ಸರಕಾರಿ ಜಮೀನನ್ನು ಗುರುತಿಸಿ ಕಾಯ್ದಿರಿಸಲಾಗಿದೆ. ಇನ್ನೂ 1,083 ಎಕರೆ ಜಮೀನು ಗುರುತಿಸಿ ಕಾಯ್ದಿರಿಸಲು ತಹಶೀಲ್ದಾರರಿಗೆ ಸೂಚಿಸಲಾಗಿದೆ. ಇದರಿಂದ 20 ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಜಿಲ್ಲೆಯ ಎಲ್ಲ ನಿವೇಶನರಹಿತರ ಸಮಗ್ರ ಸಮೀಕ್ಷೆ ನಡೆಸಿ ನಿವೇಶನ ಹಂಚಿಕೆ ಮಾಡಲು ಕಾರ್ಯಯೋಜನೆ ಸಿದ್ಧ ಪಡಿಸಲಾಗುವುದು. ಸೂಕ್ತ ಸರಕಾರಿ ಭೂಮಿ ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 191 ಮಂದಿ ರೋಗಿಗಳು 1,21,096 ರೂ. ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. ಯೋಜನೆಯಡಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ ಮಾದರಿ ಆರೋಗ್ಯ ವಿಮೆಯಾಗಿ
ಮಾಡಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಕುಮಾರ್‌, ಜಿಪಂ ಸಿಇಒ ಡಾ| ಎಂ.ಆರ್‌. ರವಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತೆ ಪ್ರಮೀಳಾ, ಉಳ್ಳಾಲ ನಗರ ಸಭೆ ಅಧ್ಯಕ್ಷ ಕುಂಞಿ ಮೋಹನ್‌ ಉಪಸ್ಥಿತರಿದ್ದರು. 

Advertisement

ವೆಬ್‌ ಸೈಟ್‌ ಅನಾವರಣ
ಹೊರ ರಾಜ್ಯ, ಜಿಲ್ಲೆಗಳಿಂದ ಜಿಲ್ಲೆಯ ದೇವಸ್ಥಾನಗಳಿಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಜಿಲ್ಲೆಯ ಪ್ರವರ್ಗ ಎ, ಬಿ ಮತ್ತು ಸಿಯ ಒಟ್ಟು 491 ದೇವಸ್ಥಾನಗಳ ಮಾಹಿತಿಯನ್ನೊಳಗೊಂಡ ವೆಬ್‌ ಸೈಟ್‌ 
www.dkannadatemples.comನ್ನು ಈ ವೇಳೆ ಅನಾವರಣಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next