Advertisement

ಹೊಸ ತಾಲೂಕು: ಹೋಬಳಿ ಮರೆತ ಸರಕಾರ!: ಸರಕಾರಿ ಸೇವೆ ಪಡೆಯಲು ಜನರ ಅಲೆದಾಟ

12:36 AM Jul 29, 2023 | Team Udayavani |

ಮಂಗಳೂರು: ಹೊಸ ತಾಲೂಕುಗಳನ್ನು ರಚಿಸಿರುವ ಸರಕಾರಗಳು ಆಡಳಿತ ವ್ಯವಸ್ಥೆಯ ಬೆನ್ನೆಲುಬಾದ “ಹೋಬಳಿ’ಗಳನ್ನು ರಚಿಸದ ಪರಿಣಾಮ ಜನರ ಮೇಲಾಗುತ್ತಿದ್ದು, ವಿವಿಧ ಸೇವೆಗಳಿಗಾಗಿ ಕಚೇರಿ ಅಲೆದಾಟಕ್ಕೆ ಮುಕ್ತಿ ಸಿಗುತ್ತಿಲ್ಲ!

Advertisement

ರಾಜ್ಯದಲ್ಲಿ 2018 ರಿಂದ ಇದುವರೆಗೆ ಒಟ್ಟು 63 ಹೊಸ ತಾಲೂಕು ಗಳನ್ನು ರಚಿಸಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಲ್ಲಿ ಹೊಸ “ಹೋಬಳಿ’ ರಚನೆ ಆಗಿಯೇ ಇಲ್ಲ. ಇದರಿಂದಾಗಿ ಕಂದಾಯ ಸಹಿತ ಪ್ರತೀ ಸರಕಾರಿ ಸೇವೆ, ಕೆಲಸಗಳಿಗೂ ದೂರದಲ್ಲಿರುವ ತಾಲೂಕು ಕಚೇರಿಗಳಿಗೇ ಎಡತಾಕಬೇಕಾದ ಸ್ಥಿತಿ ಇದೆ.

ಹೊಸ ತಾಲೂಕುಗಳಲ್ಲಿ ಮತ್ತೆ ಗ್ರಾಮ ವಿಂಗಡನೆ ಮಾಡಿ “ಹೋಬಳಿ’ ಮಾಡ ಬೇಕಾಗಿದೆ. ಜನರು ಇರುವಲ್ಲಿಂದ ಗರಿಷ್ಠ 5-6 ಕಿ.ಮೀ. ಒಳಗಡೆಯಲ್ಲಿಯೇ ಜನರಿಗೆ ಹೋಬಳಿ ಮಟ್ಟದ ಸೇವೆ ಸಿಗಬೇಕು ಎಂಬುದು ಸರಕಾರದ ಲೆಕ್ಕಾಚಾರ. ಆದರೆ ಇದಾಗದೆ ಈಗ ಜನರು ಹೋಬಳಿ ಮಟ್ಟದಲ್ಲಿ ಸಿಗುವ ಸೇವೆಗಳಿಗಾಗಿ 20-30 ಕಿ.ಮೀ. ದೂರ ತೆರಳಬೇಕಿದೆ. ಗ್ರಾಮಗಳ ಸಮೂಹ ಲೆಕ್ಕಾಚಾರ ಮಾಡಿ ಹೊಸ ತಾಲೂಕು ಘೋಷಿಸಲಾಗುತ್ತದೆ. ಅನಂತರ ಗ್ರಾಮಗಳ ಸಮೂಹವನ್ನು ಆಧ ರಿಸಿ (ಜನಸಂಖ್ಯೆ, ತಾಲೂಕು ಕೇಂದ್ರಕ್ಕೆ ಇರುವ ಅಂತರ, ಆರ್‌ಟಿಸಿ ಇರುವವರ ಸಂಖ್ಯೆ) ಹೊಸ ಹೋಬಳಿ ರಚಿಸಲಾಗುತ್ತದೆ. ಈ ಪ್ರಾಥಮಿಕ ಕೆಲಸವೇ ಇದುವರೆಗೆ ಆಗಿಲ್ಲ.

ಹೋಬಳಿಯೇ ತಾಲೂಕಾಯಿತು!

ಒಂದೊಂದು “ಹೋಬಳಿ’ಯನ್ನೇ “ಹೊಸ ತಾಲೂಕು’ ಆಗಿ ಮಾಡಲಾಗಿದೆ. ಪಾಣೆಮಂಗಳೂರು ಹಾಗೂ ಮಂಗಳೂರು “ಬಿ’ ಹೋಬಳಿಯ ಕೆಲವು ಗ್ರಾಮಗಳನ್ನು ತೆಗೆದು ಹೊಸದಾಗಿ ಉಳ್ಳಾಲ ತಾಲೂಕು ಮಾಡಲಾಯಿತಾದರೂ ಹೊಸ ಹೋಬಳಿ ಮಾಡಿಲ್ಲ. ಮೂಲ್ಕಿ ಹೋಬಳಿಯನ್ನೇ ತಾಲೂಕಾಗಿ ಮಾಡಲಾಯಿತು. ಕಡಬದಲ್ಲಿ ಕೂಡ ಹೋಬಳಿ ತಾಲೂಕಾಯಿತೇ ವಿನಾ ಹೊಸ ಹೋಬಳಿ ಆಗಿಲ್ಲ. ಮೂಡುಬಿದಿರೆ ಹೋಬಳಿಯ ಕಥೆಯೂ ಹೀಗೆಯೇ. ಉಡುಪಿ ಜಿಲ್ಲೆಯ ಹೊಸ ತಾಲೂಕುಗಳದ್ದೂ ಇದೇ ಕಥೆ.

Advertisement

ಹೋಬಳಿ ಯಾಕೆ ಅಗತ್ಯ?

l  ಹೋಬಳಿಯಲ್ಲಿ ನಾಡ ಕಚೇರಿ ಇರುತ್ತದೆ.

l  ಉಪ ತಹಶೀಲ್ದಾರ್‌ ಸಹಿತ ವಿವಿಧ ಅಧಿಕಾರಿಗಳು ಲಭ್ಯ.

l  ಕಂದಾಯ ಇಲಾಖೆ ಸಂಬಂಧಿ ಬಹುತೇಕ ಕೆಲಸಗಳು ಇಲ್ಲಿ ಲಭ್ಯ.

l  ಪಿಂಚಣಿ ಸಹಿತ ವಿವಿಧ ಸೇವೆಗಳನ್ನು ಪಡೆಯಬಹುದು.

l  ಪ್ರತಿಯೊಂದಕ್ಕೂ ತಾಲೂಕು ಕಚೇರಿಗೆ ಅಲೆದಾಡುವ ಪ್ರಮೇಯ ಇರುವುದಿಲ್ಲ.

l  ಸರಕಾರದಿಂದ “ಹೋಬಳಿ’ ಮಟ್ಟದ ಅನುದಾನ ಹಂಚಿಕೆ ಸಾಧ್ಯ.

l ಹೋಬಳಿ ಮಟ್ಟದ ಕ್ರೀಡಾಕೂಟ, ಯುವಜನ ಮೇಳ ಇತ್ಯಾದಿ ಆಯೋಜನೆ ಸಾಧ್ಯ.

l  ಹೋಬಳಿ ಮಟ್ಟದ ಆಡಳಿತ ಸುಧಾ ರಣೆಗೆ ವಿಶೇಷ ಸಭೆ ಆಯೋಜನೆ.

l  ಪಶು ವೈದ್ಯಕೀಯ ಆಸ್ಪತ್ರೆ, ಮೆಸ್ಕಾಂ ಶಾಖಾ ಅಧಿಕಾರಿ, ಕೃಷಿ ಅಧಿಕಾರಿ ಸಹಿತ ವಿವಿಧ ಆಡಳಿತ ಕೇಂದ್ರಗಳು ಲಭ್ಯ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next