ಶಿರಸಿ: ಕರುಣಿಸು ಜಗದಂಬೆ ಶಿರಸಿ ಮಾರಿಕಾಂಬೆ ಎಂದು ಭಕ್ತಿಯಿಂದ ಬೇಡಿಕೊಳ್ಳುವ ಭಜಕರಿಗೆ ಅಯ್ಯೋ ರಾಮ ಕಾಲು ತೊಳೆದಾಗಿಲ್ಲ ಎಂಬ ಚಿಂತೆ ಇಲ್ಲ. ಭಕ್ತರಿಗೆ ಇನ್ನು ಇದು ಮರೆಯುವುದೂ ಇಲ್ಲ. ಏಕೆಂದರೆ, ಮಾರಿಕಾಂಬಾ ದೇವಸ್ಥಾನದಿಂದಲೇ ವೈಜ್ಞಾನಿಕ ವಿಧಾನ ಬಳಸಿ ನೂತನ ಝರಿ ನೀರಿನ ಯೋಜನೆ ಆರಂಭಿಸಲಾಗಿದೆ.
ಮಾರಿಕಾಂಬಾ ದೇವಿಯ ದರ್ಶನಕ್ಕೆ ಬರುವವರು ದೇಗುಲದ ದ್ವಾರಕ್ಕೆ ಬರಬರತ್ತಲೇ ಹಾದಿಗೆ ಅಡ್ಡಲಾಗಿ ಹರಿಯುವ ನೀರಿನಲ್ಲಿ ಸುಲಭವಾಗಿ ಕಾಲು ತೊಳೆದು ಭಕ್ತಿ ಭಾವದಲ್ಲಿ ತಣ್ಣಗೆ ದೇವರ ಬಳಿಗೆ ಹೋಗುವುದಕ್ಕೆ ಅನುಕೂಲವಾಗಿದೆ. ಮಾರಿಕಾಂಬಾ ದೇವಸ್ಥಾನಕ್ಕೆ ನಾಡಿನ ಮೂಲೆಮೂಲೆಯಿಂದ ಭಕ್ತರು ಆಗಮಿಸುವುದು ಸಾಮಾನ್ಯ. ಬಹುತೇಕ ದಿನಗಳಲ್ಲಿ ದೇಗುಲ ಭಕ್ತರಿಂದ ಗಿಜಗುಡುತ್ತದೆ. ಅದರಲ್ಲೂ ಹಾವೇರಿ, ಹಾನಗಲ್ ಸೇರಿದಂತೆ ನಾನಾ ಕಡೆಯಿಂದ ನಿತ್ಯ ಸಾವಿರಾರು ಮಂದಿ ದೇವಿಯ ದರ್ಶನಕ್ಕೆ ಆಗಮಿಸುತ್ತಲೇ ಇರುತ್ತಾರೆ. ಅದರಂತೆ ಜಿಲ್ಲೆಯ ಪ್ರವಾಸಕ್ಕೆಂದು ರಾಜ್ಯದ ಯಾವುದೇ ಮೂಲೆಯಿಂದ ಜನ ಬಂದರು ಇಲ್ಲಿಯ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಉಡಿ ಸೇವೆ ಸಲ್ಲಿಸಿ ತೆರಳುವುದು ರೂಢಿ. ಹೀಗೆ ದೇಗುಲದೊಳಕ್ಕೆ ಹೋಗುವಾಗ ಕೈಕಾಲು ತೊಳೆದು ಪಾವಿತ್ಯ ಭಾವನೆಯಿಂದ ತೆರಳಿ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಇದಕ್ಕೆ ಪೂರಕ ಎಂಬಂತೆ ಈ ಸುಲಭ ಸೌಲಭ್ಯವನ್ನು ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಿದೆ.
ದೇವಸ್ಥಾನಕ್ಕೆ ಬರುವ ಭಕ್ತರು ದೇಗುಲದ ದ್ವಾರದ ಅಂಚಿನಲ್ಲಿದ್ದ ನಲ್ಲಿ ನೀರಿನಲ್ಲಿ ಕಾಲು ತೊಳೆದು ಒಳಕ್ಕೆ ಬರುತ್ತಿದ್ದರು. ಸಾವಿರಾರು ಭಕ್ತರು ಬರುತ್ತಲೇ ಇರುವುದರಿಂದ ಒಮ್ಮೆಲೆ ನಲ್ಲಿಗಳಲ್ಲಿ ಕಾಲು ತೊಳೆದು ಹೋಗುವುದು ಕಷ್ಟವಾಗುತ್ತಿತ್ತು. ಕೆಲ ಸಮಯ ನಿಂತು ಒಬ್ಬರಾದ ನಂತರ ಒಬ್ಬರು ಹೋಗಬೇಕಾಗಿತ್ತು. ಇತ್ತೀಚ್ಛೆಗೆ ದೇಗುಲ ಎದುರಿನ ರಸ್ತೆಯಂಚಿನಲ್ಲಿ ಕಾಲು ತೊಳೆಯುವ ವ್ಯವಸ್ಥೆ ಮಾಡಲಾಗಿದ್ದು, ಕಾಲು ತೊಳೆದ ನಂತರವೂ ಕೆಲ ಹೆಜ್ಜೆ ರಸ್ತೆಯಲ್ಲಿ ಬರಿಗಾಲಿನಲ್ಲಿ ಬರಬೇಕಾಗಿತ್ತು. ಅಷ್ಟೊತ್ತಿಗೆ ಕಾಲಿಗೆ ಮಣ್ಣೆಲ್ಲಾ ತಗುಲುತ್ತಿತ್ತು. ಇದೇ ಸ್ಥಿತಿಯಲ್ಲಿ ದೇವಾಲಯಕ್ಕೆ ಹೋಗುವ ಪ್ರಸಂಗ ಎದುರಾಗಿತ್ತು. ಆದರೆ ಈಗ ಅದು ತಪ್ಪಿದಂತಾಗಿದೆ ಎಂಬ ಹಲವು ಭಕ್ತರು ಖುಷಿಯಿಂದ ಹೇಳುತ್ತಾರೆ.
ದೇವಸ್ಥಾನಕ್ಕೆ ನೀರಿನ ಮೂಲ ಬಾವಿ. ಬೇಸಿಗೆಯ ದಿನಗಳಲ್ಲಿ ನೀರಿನ ಪರಿಪೂರ್ಣತೆ ಸಿಗದು. ಇಲ್ಲಿ ಕಾಲು ತೊಳೆಯಲೆಂದೇ ಸಾವಿರಾರು ಲೀಟರ್ ನೀರು ಇಲ್ಲಿ ಅವಶ್ಯವಿದೆ. ಆದರೆ ಈ ಹೊಸ ಸೌಲಭ್ಯದಿಂದ ನೀರಿನ ಬಳಕೆ ಸಾಕಷ್ಟು ಕಡಿಮೆಯಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ.
ಮಾರಿಕಾಂಬಾ ದೇವಸ್ಥಾನಕ್ಕೆ ರಸ್ತೆಯಿಂದ ದೇಗುಲದ ಎದುರಿನ ಮೆಟ್ಟಿಲು ಹತ್ತಿ ಮುಂದಕ್ಕೆ ಬರುತ್ತಿದ್ದಂತೆ ದೇಗುಲದೊಳಗೆ ಹೋಗುವ ಮಾರ್ಗದ ಅಡ್ಡಲಾಗಿ ಸಣ್ಣದಾದ ತಗ್ಗು ಕಾಣುತ್ತದೆ. ಅಲ್ಲಿ ಗಿಡಗಳಿಗೆ ನೀರ ಹಾಯಿಸಲು ಹಾಕುವ ಡ್ರಿಪ್ ಪೈಪ್‌ಗ್ಳಲ್ಲಿ ನೀರು ನೆಲದ ಹಂತದಲ್ಲೇ ಬಂದು ಹರಿಯುತ್ತದೆ. ದೇಗುಲಕ್ಕೆ ಹೋಗುವ ಭಕ್ತರು ನೀರಿರುವ ತಗ್ಗಿನಲ್ಲಿ ಕಾಲಿಟ್ಟು ಸ್ವಚ್ಛಗೊಳಿಸಿಕೊಂಡು ತೆರಳುತ್ತಾರೆ. ಇದರಿಂದ ಒಮ್ಮೆಲೆ ಹಲವು ಜನ ಬಂದರು ಬೇಗಬೇಗನೇ ಕಾಲಿಡುತ್ತಾ ಶುದ್ಧಗೊಳಿಸಿಕೊಂಡು ತೆರಳುವುದಕ್ಕೆ ಅನುಕೂಲವಾಗಿದೆ. ನೀರಿನ ಕೊರತೆ ಎದುರಿಸುತ್ತಿರುವ ಕಾಲದಲ್ಲಿ ನೀರನ್ನು ಹಿತಮಿತವಾಗಿ ಬಳಸಬೇಕು ಎಂಬ ಕಾರಣದಿಂದ ಭಕ್ತರಿಗೆ ಕೈಕಾಲು ತೊಳೆಯಲು ಸುಲಭ ಹಾಗೂ ಸುಧಾರಿತ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ನೀರಿನ ಸದ್ಭಳಕೆಯ ಜತೆಯಲ್ಲಿ ಭಕ್ತರಿಗೆ ಸಮಯವೂ ಉಳಿತಾಯವಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಅಧ್ಯಕ್ಷ ಡಾ| ವೆಂಕಟೇಶ ನಾಯ್ಕ.
ಅನೇಕ ಹೊಸ ಹೊಸ ಯೋಜನೆಗಳಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿರುವ ಮಾರಿಗುಡಿಯಲ್ಲಿ ಈಗ ಹೊಸತೊಂದು ಸೇವೆ ಸೇರ್ಪಡೆ ಆದಂತಾಗಿದೆ.