ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಪ್ರಕರಣದ ದೋಷಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಿಂದೆ ಸರಿದಿದ್ದು, ಸಿಜೆಐ ಸ್ಥಾನಕ್ಕೆ ಕನ್ನಡಿಗ ನ್ಯಾ.ಬೋಪಣ್ಣ ನೇಮಕವಾಗಿದ್ದು, ಬುಧವಾರ 10-30ಕ್ಕೆ ವಿಚಾರಣೆ ನಡೆಯಲಿದೆ.
ಸುಪ್ರೀಂಕೋರ್ಟ್ ನ ನೂತನ ತ್ರಿಸದಸ್ಯ ಪೀಠ ಬುಧವಾರ ದೋಷಿ ಅಕ್ಷಯ್ ಸಿಂಗ್ ಅರ್ಜಿ ವಿಚಾರಣೆ ನಡೆಸಲಿದೆ. ಪ್ರಕರಣದ ವಿಚಾರಣೆಯಿಂದ ಸಿಜೆಐ ಎಸ್ ಎ ಬೋಬ್ಡೆ ಅವರು ಹಿಂದೆ ಸರಿದಿದ್ದಾರೆ. ಹಿಂದೊಮ್ಮೆ ತಮ್ಮ ಬಂಧುಗಳು ನಿರ್ಭಯಾ ತಾಯಿ ಪರವಾಗಿ ವಾದಿಸಿದ್ದರು. ಹೀಗಾಗಿ ಬೇರೊಂದು ನ್ಯಾಯಪೀಠದ ಮೂಲಕ ಪ್ರಕರಣದ ವಿಚಾರಣೆ ನಡೆಸುವುದು ಸೂಕ್ತ ಎಂದು ಭಾವಿಸುವುದಾಗಿ ಸಿಜೆಐ ಸ್ಪಷ್ಟನೆ ನೀಡಿದ್ದರು.
ಸಿಜೆಐ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಜಸ್ಟೀಸ್ ಆರ್ ಭಾನುಮತಿ ಹಾಗೂ ಜಸ್ಟೀಸ್ ಅಶೋಕ್ ಭೂಷಣ್ ಇದ್ದಿದ್ದು, ಇದೀಗ ಸಿಜೆಐ ಸ್ಥಾನಕ್ಕೆ ಕನ್ನಡಿಗ ಜಸ್ಟೀಸ್ ಎಸ್ ಎ ಬೋಪಣ್ಣ ಅವರನ್ನು ನೇಮಕ ಮಾಡಲಾಗಿದೆ.
ಕೊಡಗಿನ ಎಸ್ ಎ ಬೋಪಣ್ಣ:
ಕೊಡಗಿನ ಅಜ್ಜಿಕುಟ್ಟಿರ ಎಸ್.ಬೋಪಣ್ಣ ಹಿರಿಯ ವಕೀಲರಾಗಿದ್ದ ದಿ.ಎಕೆ ಸುಬ್ಬಯ್ಯ ಅವರ ಪುತ್ರ. ಗುವಾಹಟಿ ಉಚ್ಚನ್ಯಾಯಾಲಯದ ಚೀಫ್ ಜಸ್ಟೀಸ್ ಆಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದ ಬೋಪಣ್ಣ ಅವರು ಗುವಾಹಟಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದೀಗ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದಾರೆ.