ಬೆಂಗಳೂರು: ನಗರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು, ಪಾಲಿಕೆಯಲ್ಲಿನ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯಬೇಕು, ಶೀಘ್ರ ರಸ್ತೆಗುಂಡಿ ಮುಚ್ಚಲು ಕ್ರಮಕೈಗೊಳ್ಳಿ, ಪಾಲಿಕೆ ಸಭೆಗಳನ್ನು ಸರಿಯಾದ ಸಮಯಕ್ಕೆ ಆರಂಭಿಸಿ, ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಮಹತ್ವ ನೀಡಿ… ಬುಧವಾರ ಬಿಬಿಎಂಪಿಯಲ್ಲಿ ನಡೆದ ಸಭೆಯಲ್ಲಿ ನೂತನ ಮೇಯರ್ ಗಂಗಾಂಬಿಕೆ ಅವರಿಗೆ ಮಾಜಿ ಮಹಾಪೌರರುಗಳು ನೀಡಿದ ಸಲಹೆಗಳಿವು. ನಗರದ ಅಭಿವೃದ್ಧಿ ದೃಷ್ಟಿಯಿಂದ ಸೀಮಿತ ಒಂದು ವರ್ಷದ ಅವಧಿಯಲ್ಲಿ ರೂಪಿಸಬಹುದಾದ ಯೋಜನೆಗಳು, ಆದ್ಯತೆ ನೀಡಬೇಕಾದ ವಿಷಯಗಳು ಕುರಿತು ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಮೇಯರ್ ಗಂಗಾಂಬಿಕೆ ಬುಧವಾರ ಮಾಜಿ ಮೇಯರ್‌ಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಹುಚ್ಚಪ್ಪ ಹಾಗೂ ಎಸ್ .ನಟರಾಜ್ ಅವರು, ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಳಿವಿಗೆ ಅಗತ್ಯ ಕ್ರಮಗಳನ್ನು
ಕೈಗೊಳ್ಳಲು ಮುಂದಾಗಬೇಕಿದೆ. ಪಾಲಿಕೆಯಲ್ಲಿಯ ಎಲ್ಲ ರೀತಿಯ ಪ್ರಕ್ರಿಯೆಗಳು ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ನಡೆಸಬೇಕು. ಕನ್ನಡ ನಾಡು-ನುಡಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಕಾರ್ಯಕ್ರಮಗಳನ್ನು
ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕಟ್ಟೆ ಸತ್ಯನಾರಾಯಣ ಅವರು ಮಾತನಾಡಿ, ಕೆ.ಆರ್.ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯ ವಿಲೇವಾರಿಗಾಗಿ ಅಲ್ಲಿಯೇ ಒಂದು ಬಯೋಮಿಥನೈಸೇಷನ್ ಘಟಕವನ್ನು ನಿರ್ಮಿಸಲಾಗಿದೆ. ಅದೇ ರೀತಿ ನಗರದ 13 ಕಡೆಗಳಲ್ಲಿ ನಿರ್ಮಿಸಿರುವ ಘಟಕಗಳು ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಕೂಡಲೇ ಘಟಕಗಳನ್ನು ವ್ಯವಸ್ಥಿತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದರು.
ಇನ್ನು ನಿರ್ಗಮಿತ ಮೇಯರ್ ಸಂಪತ್ ರಾಜ್ ಅವರು, ಎಲ್ಲ ಮಾಜಿ ಮೇಯರ್‌ಗಳು, ನಾಯಕರ ಸಲಹೆಗಳನ್ನು ಪಡೆಯಿರಿ. ಆದರೆ, “ನಿಮ್ಮ ಸಿಕ್ ಸೆನ್ಸ್ ಯುಸ್ ಮಾಡಿ ಕೆಲಸ ಮಾಡಿ’ ಎಂದು ಸಲಹೆ ನೀಡಿದ್ದಾರೆ.
ಪಾಲಿಕೆ ಸಭೆಗಳಲ್ಲಿ ಶಿಸ್ತು ಕಾಣಿಸುತ್ತಿಲ್ಲ. ಸರಿಯಾದ ಸಮಯಕ್ಕೆ ಸಭೆ ಆಂಭವಾಗುತ್ತಿಲ್ಲ, ಮುಗಿಯುತ್ತಿಲ್ಲ.
ಹೀಗಾಗಿ ಸರಿಯಾದ ಸಮಯಕ್ಕೆ ಪಾಲಿಕೆಯ ಸಭೆಗಳನ್ನು ಆರಂಭಿಸಿ, ಸರಿಯಾದ ರೀತಿಯಲ್ಲಿ ಸಭೆಗಳನ್ನು
ನಡೆಸಿಕೊಂಡು ಹೋಗಬೇಕು.
ಜಿ.ಪದ್ಮಾವತಿ, ಮಾಜಿ ಮೇಯರ್