ವಿಜಯಪುರ : ಕೋವಿಡ್-19 ಲಾಕ್ ಡೌನ್ ನಿರ್ಬಂಧ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಇಳಿಯುತ್ತಿರುವ ಬೈಕ್ ಸವಾರರನ್ನು ನಿಯಂತ್ರಿಸಲು ವಿಜಯಪುರ ಪೊಲೀಸರು ಕುಂಕುಮ ಹಚ್ಚಿ ಮಂಗಳಾರತಿ ಬೆಳಗುವ ಮೂಲಕ ಮುಜುಗುರ ತಂದೊಡ್ಡಿ ಪರಿಸ್ಥಿತಿ ನಿಭಾಯಿಸಲು ಮುಂದಾಗಿದ್ದಾರೆ.
ಲಾಕ್ ಡೌನ್ ಘೋಷಣೆ ಬಳಿಕವೂ ಮನೆಯಲ್ಲಿ ಇರದೇ ಅನಗತ್ಯವಾಗಿ ರಸ್ತೆಗೆ ಇಳಿಯುತ್ತಿದ್ದ ಯುವಕರಿಗೆ ಲಾಠಿ ಹೊಡೆಯದ ರುಚಿ ನೀಡಿದ್ದರು. ಇದಕ್ಕೂ ಬಗ್ಗದಿದ್ದಾಗ ಲಾಠಿ ಏಟಿನೊಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟಿದ್ದರು. ಲಾಠಿ ರುಚಿ, ಬಸ್ಕಿ ಶಿಕ್ಷೆಗೂ ಬಗ್ಗದಾದಾಗ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿ, 393 ವಾಹನಗಳನ್ನೂ ವಶಕ್ಕೆ ಪಡೆದಿದ್ದರು. ಇಷ್ಟಾದರೂ ಲಾಕ್ ಡೌನ್ ನಿರ್ಬಂಧ ಉಲ್ಲಂಘಿಸಿ ರಸ್ತೆಗೆ ಬರುವವರ ಸಂಖ್ಯೆ ಕುಸಿದಿಲ್ಲ.
ಅನಗತ್ಯ ಬೀದಿ ಸುತ್ತುವ ಬೈಕ್ ಸವಾರರು, ವಾಹನ ಚಾಲಕರು, ಪ್ರಯಾಣಿಕರಿಗೆ ಭಾನುವಾರ ನಾನು ಸಮಾಜ ವಿರೋಧಿ, ನನ್ನನ್ನು ಕ್ಷಮಿಸಿ ಎಂದು ಹಣೆಗೆ ಸ್ಟ್ಯಾಂಪಿಗ್ ಸೀಲ ಹಾಕಿದ್ದರು. ಇದಕ್ಕೂ ಅಂಜದೇ ರಸ್ತೆಗೆ ಬರುತ್ತಲೇ ಇದ್ದಾರೆ.
ಹಲವು ಪ್ರಯೋಗಗಳ ಹೊರತಾಗಿಯೂ ಅನಗತ್ಯ ಬೀದಿಗೆ ಬರುವವರನ್ನು ನಿಯಂತ್ರಿಸಲು ಗಾಂಧಿ ಚೌಕ್ ಠಾಣೆ ಸಿಪಿಐ ನಾಯ್ಕೋಡಿ, ಎಸೈ ಆರೀಫ ಸೋಮವಾರ ದಿಂದ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ರಸ್ತೆಗೆ ಬರುವ ಬೈಕ್ ಸವಾರರ ಹಣೆಗೆ ಕುಂಕುಮ ಇರಿಸಿ, ಊದಬತ್ತಿಯ ಹೊಗೆ ಹಾಕಿ, ಮಂಗಳಾರತಿ ಮಾಡುತ್ತಿದ್ದಾರೆ.
ಈ ಪ್ರಯೋಗವಾದರೂ ಫಲ ನೀಡಲಿ. ಇದೂ ಫಲಿಸದಿದ್ದಲ್ಲಿ ಮತ್ತೆ ಇನ್ಯಾವ ಪ್ರಯೋಗ ಮಾಡುತ್ತಾರೋ ಎಂದು ಕುತುಹಲದಿಂದ ಕಾಯುವಂತೆ ಮಾಡಿದೆ.