Advertisement
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ| ಬಿ.ಆರ್. ರವಿಕಾಂತೇ ಗೌಡ ಭಡ್ತಿ ಹೊಂದಿದ್ದು, ಬೆಂಗಳೂರಿನ ಅಗ್ನಿಶಾಮಕ ಸೇವೆಯ ಐಜಿಪಿಯಾಗಿ ನೇಮಿಸಲಾಗಿದೆ. 2018ರ ವರ್ಷಾಂತ್ಯದ ದಿನ 10 ಜನ ಹಿರಿಯ ಅಧಿಕಾರಿಗಳಿಗೆ ಭಡ್ತಿಯೂ ಸೇರಿದಂತೆ ಒಟ್ಟು 21 ಮಂದಿ ಐಪಿಎಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಅವರ ವರ್ಗಾವಣೆ ಮತ್ತು ಅವರಿಂದ ತೆರವಾದ ಸ್ಥಾನಕ್ಕೆ ಹೊಸ ಅಧಿಕಾರಿಯ ನೇಮಕವೂ ಇದರಲ್ಲಿ ಸೇರಿದೆ.
ಬಿ.ಎಂ. ಲಕ್ಷ್ಮೀಪ್ರಸಾದ್ 2014ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ಎಸ್‌ಪಿ (ಭಯೋತ್ಪಾದನಾ ನಿಗ್ರಹ ಕೇಂದ್ರ- ಸಿಸಿಟಿ) ಆಗಿದ್ದರು. ಬೆಂಗಳೂರಿನ ಕಸ್ತೂರಿನಗರ ನಿವಾಸಿಯಾಗಿರುವ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು ಎಚ್‌ಪಿ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಆದರೆ ಐಎಎಸ್ / ಐಪಿಎಸ್ ಅಧಿಕಾರಿಯಾಗಬೇಕೆಂಬ ಮಹದಾಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿದ್ದರು. ಕೈತುಂಬ ಸಂಬಳ ಬರುತ್ತಿದ್ದ ಐಟಿ ಕಂಪೆನಿ ಉದ್ಯೋಗ ತೊರೆದು 2014ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇರಿದ್ದು ಇವರ ವಿಶೇಷ. ಆರು ಕಿ. ಮೀ. ಬೆನ್ನಟ್ಟಿ ಬಂಧನ
2017ರ ಜನವರಿಯಲ್ಲಿ ಬಾಗಲಕೋಟೆ ಎಎಸ್‌ಪಿ ಆಗಿದ್ದಾಗ ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು 6 ಕಿ.ಮೀ. ಬೆನ್ನಟ್ಟಿ ಓರ್ವನನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. 45 ನಿಮಿಷ ಕಾಲ ಬೆನ್ನಟ್ಟಿದ್ದು, ಈ ಕಾರ್ಯಾಚರಣೆ ಮನ್ನಣೆಗೆ ಪಾತ್ರವಾಗಿತ್ತು. ಬಳಿಕ ವಿಜಯಪುರ ಎಸ್‌ಪಿಯಾಗಿ, ಎಎನ್‌ಎಫ್ ಎಸ್‌ಪಿಯಾಗಿದ್ದರು. ವರ್ಷದಿಂದ ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದರು.