Advertisement

ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಹೊಸ ತಂತ್ರಾಂಶ

03:29 PM Mar 04, 2020 | Suhan S |

ಗಜೇಂದ್ರಗಡ: ಕಚೇರಿಗೆ ಅಲೆಯುವುದು, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರು ನಿರ್ಮಾಣ-2 ತಂತ್ರಾಂಶದಲ್ಲಿ ಪರವಾನಗಿ ಪಡೆಯಲು ಹೊಸ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ನಿರ್ಮಾಣ-2 ತಂತ್ರಾಂಶದಲ್ಲಿ ಪರವಾನಗಿ ಪಡೆದ ಸಾರ್ವಜನಿಕರಿಗೆ ಪರವಾನಗಿ ಪತ್ರ ವಿತರಿಸಿ ಮಾತನಾಡಿದ ಅವರು, ಕಟ್ಟಡ ಪರವಾನಗಿ ಈ ಮೊದಲು ಪುರಸಭೆಯಲ್ಲಿ ನೀಡಲಾಗುತ್ತಿತ್ತು. ಆದರೀಗ ಸಾರ್ವಜನಿಕರ ಅಂತರ್‌ ಜಾಲತಾಣದಲ್ಲಿ ಹಾಗೂ ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಾಗರಿಕ ಆನ್‌ಲೈನ್‌ ಸೇವೆಗಳ ವಿಭಾಗದಲ್ಲಿ ಅಳವಡಿಸಿದ ಹೊಸ ತಂತ್ರಾಂಶ ನಿರ್ಮಾಣ-2 ಕಟ್ಟಡ ಪರವಾನಗಿಯ ಅರ್ಜಿ ಸಲ್ಲಿಸಬಹುದಾಗಿದೆ.

ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಅನುಮತಿ ಸಿಗುತ್ತದೆ. ಬಳಿಕ ನಿಗದಿತ ಶುಲ್ಕವನ್ನು ಪಾವತಿಸಿದರೆ ಆನ್‌ಲೈನ್‌ ಮೂಲಕವೇ ಡಿಜಿಟಲ್‌ ಸಹಿಯುಳ್ಳ ಅನುಮತಿ ಪತ್ರ ಸಿಗುತ್ತದೆ. ಈಗಾಗಲೇ 2019 ಡಿ. 5ರಿಂದಲೇ ರಾಜ್ಯದಲ್ಲಿ ಹೊಸ ತಂತ್ರಾಂಶ ಜಾರಿಗೆ ಬಂದಿದ್ದು, ಸ್ಥಳೀಯ ಪುರಸಭೆಯಲ್ಲಿಯೂ ಈ ತಂತ್ರಾಂಶ ಜಾರಿಗೊಳಿಸಲಾಗಿದ್ದು, ಅರ್ಜಿ ಸಲ್ಲಿಸಿದ್ದ ಕೆಲವರಿಗೆ ಪರವಾನಿಗೆ ಪತ್ರವನ್ನು ನೀಡಲಾಗಿದೆ ಎಂದರು.

ಇದೇ ವೇಳೆ ಅಭಿಯಂತರ ಟಿ. ಸಿದ್ದಲಿಂಗಸ್ವಾಮಿ, ಸರ್ಕಾರ ಜಾರಿಗೊಳಿಸಿದ ನಿರ್ಮಾಣ-2 ತಂತ್ರಾಂಶ ಸಾರ್ವಜನಿಕರಿಗೆ ಅತ್ಯುತ್ತಮವಾದದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಕಾರಿಯಾಗಿದೆ. ಆದರೆ ತಾಂತ್ರಿಕ ಸಮಸ್ಯೆಯೂ ಇದ್ದು, ನಿಗದಿತ ಅವಧಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಪತ್ರ ದೊರೆಯದಂತಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೂ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿದೂಗಿಸಲು ಮುಂದಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಐವರಿಗೆ ಕಟ್ಟಡ ಪರವಾನಗಿ ಪತ್ರವನ್ನು ವಿತರಿಸಲಾಯಿತು. ವಿ.ಎಲ್‌. ಬಡಿಗೇರ, ಸಾಗರ ಭಾಂಡಗೆ, ರಾಕೇಶ ಹಂಚಾಟೆ, ಸಿ.ಡಿ. ದೊಡ್ಡಮನಿ, ಹೇಮರಾಜ ಅಣ್ಣಿಗೇರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next