ಕುಂಟಾರು: ಕುಂಟಾರು ಮಹಾವಿಷ್ಣು ದೇವಸ್ಥಾನದ ಸಮೀಪ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಅಂತೂ ದುರಸ್ತಿ ಭಾಗ್ಯ ಕಂಡಿದೆ. ಮುರಿದ ಸ್ಥಿತಿಯಲ್ಲಿದ್ದ ತೂಗು ಸೇತುವೆ ಹಲಗೆಗಳಿಗೆ ಹೊಸ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ. ತೂಗುಸೇತುವೆಯ ಸಿಮೆಂಟು ಶೀಟಿನ ಸ್ಲ್ಯಾಬ್ ಗಳು ಶಿಥಿಲಗೊಂಡು ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಆ. 28ರಂದು ಉದಯವಾಣಿ ಸುದಿನ ‘ಅಪಾಯದ ಸ್ಥಿತಿನಲ್ಲಿದೆ ಕುಂಟಾರು ತೂಗುಸೇತುವೆ’ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ದೇಲಂಪಾಡಿ ಗ್ರಾಮ ಪಂಚಾಯತ್ ಸ್ಪಂದಿಸಿದ್ದು, ದುರಸ್ತಿ ಕಾರ್ಯ ಪೂರ್ಣಗೊಳಿಸಿದೆ.
ಹೊಸ ಸ್ಲ್ಯಾಬ್
ಮುರಿದು ಬೀಳುತ್ತಿದ್ದ ತೂಗುಸೇತುವೆಯ ಸಿಮೆಂಟು ಹಲಗೆಗಳನ್ನು ಬದಲಾಯಿಸಿ ಹೊಸ ಸ್ಲ್ಯಾಬ್ ಗಳನ್ನು ಹಾಕಲಾಗಿದೆ.
ದೇಲಂಪಾಡಿ ಗ್ರಾ.ಪಂ. ಸದಸ್ಯ ಗಂಗಾಧರ ಅವರ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ದುರಸ್ತಿ ಕಾರ್ಯ ಮಾಡಲಾಯಿತು. ದ್ವಿಚಕ್ರ ವಾಹನ ಓಡಾಡದಂತೆ ನಿಗಾ ತೂಗು ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಅತಿಯಾದ ಓಡಾಟದಿಂದ ಹೆಚ್ಚಿನ ಸಿಮೆಂಟು ಶೀಟುಗಳು ನಶಿಸುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದು, ವಾಹನಗಳು ತೂಗು ಸೇತುವೆಯ ಮೇಲೆ ಓಡಾಡದಂತೆ ನಿಗಾ ವಹಿಸುತ್ತಿದ್ದಾರೆ.