ಕೊಪ್ಪಳ: ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಕೋವಿಡ್-19 ಸೋಂಕು ಏರಿಕೆಯಾಗುತ್ತಿದೆ. ಶುಕ್ರವಾರ ಮತ್ತೆ ಆರು ಜನರಿಗೆ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾದಂತಾಗಿದೆ.
ಜೂನ್ 16ರಂದು ಆಂಧ್ರಪ್ರದೇಶದ ವಿಜಯವಾಡದಿಂದ ಗಂಗಾವತಿ ತಾಲೂಕಿನ ಶ್ರೀರಾಮನಗರಕ್ಕೆ ಬಂದಿದ್ದ 45 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ ಮತ್ತು 17 ವರ್ಷದ ಯುವತಿಗೆ ಕೋವಿಡ್-19 ವೈರಸ್ ದೃಢವಾಗಿದೆ.
ಇನ್ನೂ ಬಳ್ಳಾರಿ ಜಿಲ್ಲೆಯ ಮಲಪನಗುಡಿಯಿಂದ ಹುಲಗಿಗೆ ಜೂನ್ 14 ರಂದು ಆಗಮಿಸಿದ್ದ ಹುಲಗಿಯ 65 ವರ್ಷದ ವ್ಯಕ್ತಿಗೆ, ಜೂನ್ 12 ರಂದು ಜಿಂದಾಲ್ ನಿಂದ ಬಂದಿದ್ದ ಹೊಸಲಿಂಗಾಪುರ ಗ್ರಾಮದ 38 ವರ್ಷದ ವ್ಯಕ್ತಿಗೆ ಹಾಗೂ ಜೂನ್ 16 ರಂದು ಬೆಂಗಳೂರಿನಿಂದ ಬಂದಿದ್ದ ಕುಕನೂರಿನ ಕಕ್ಕಿಹಾಳ ಗ್ರಾಮದ 14 ವರ್ಷದ ಬಾಲಕನಿಗೆ ಸೋಂಕು ತಾಗಿರುವುದು ದೃಢಪಟ್ಟಿದೆ.
ಇನ್ನು ಜಿಲ್ಲೆಯಲ್ಲಿ ಪತ್ತೆಯಾಗಿದ ಆರು ಜನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ ಎಂದು ಡಿಸಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 28ಕ್ಕೇರಿದೆ. ಇದರಲ್ಲಿ 11 ಜನ ಗುಣಮುಖರಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಉಳಿದವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.