ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ “ಕಪೋ ಕಲ್ಪಿತಂ’ ಚಿತ್ರದ ಮೂಲಕ ನವ ನಿರ್ದೇಶಕಿಯೊಬ್ಬರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಅವರೇ ಸುಮಿತ್ರಾ ಗೌಡ.
ಈ ಹಿಂದೆ “ಜಿಷ್ಣು’ ಸಿನಿಮಾದಲ್ಲಿ ನಾಯಕಿಯಾಗಿ ಮತ್ತು ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವವಿರುವ ಸುಮಿತ್ರಾ ಗೌಡ “ಕಪೋ ಕಲ್ಪಿತಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ತೆರೆಮೇಲೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಸುಮಿತ್ರಾ ಗೌಡ ಚೊಚ್ಚಲ ನಿರ್ದೇಶನದ “ಕಪೋ ಕಲ್ಪಿತಂ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೂಡ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ “ಕಪೋ ಕಲ್ಪಿತಂ’ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ಚಿತ್ರದ ಬಗ್ಗೆ ಮೊದಲಿಗೆ ಮಾತನಾಡಿದ ನಾಯಕಿ ಕಂ ನಿರ್ದೇಶಕಿ ಸುಮಿತ್ರಾ ಗೌಡ, “ಇದೊಂದು ಹಾರರ್ ಶೈಲಿಯ ಸಿನಿಮಾವಾಗಿದ್ದು, ಮನುಷ್ಯನ ಭ್ರಮೆ ಹೇಗೆಲ್ಲ ಕೆಲಸ ಮಾಡುತ್ತದೆ ಅನ್ನೋದರ ಸುತ್ತ ಸಿನಿಮಾ ನಡೆಯುತ್ತದೆ. ಯುವಕರ ತಂಡವೊಂದು ನಿರ್ಜನ ಪ್ರದೇಶದಲ್ಲಿರುವ ಮನೆಗೆ ಹೋಗುತ್ತದೆ. ಅಲ್ಲಿ ಅವರಿಗಾಗುವ ವಿಚಿತ್ರ ಅನುಭವಗಳು, ಅದರಿಂದ ಅವರು ಹೇಗೆ ಹೊರಗೆ ಬರುತ್ತಾರೆ ಎನ್ನುವುದು ಸಿನಿಮಾದ ಕಥೆಯ ಎಳೆ.
ಇದನ್ನೂ ಓದಿ;-
ಚಿಂತಾಮಣಿ: ನೀರಿನಲ್ಲಿ ಮುಳುಗಿ ಹುಡುಗ ಸಾವು
ಇದರಲ್ಲಿ ನಾನು ಜರ್ನಲಿಸ್ಟ್ ಪಾತ್ರ ಮಾಡಿದ್ದೇನೆ. ಈಗಾಗಲೇ ಸಿನಿಮಾದ ಕೆಲಸಗಳು ಪೂರ್ಣಗೊಂಡಿದ್ದು ನವೆಂಬರ್ ವೇಳೆಗೆ ರಿಲೀಸ್ ಮಾಡುವ ಯೋಚನೆಯಿದೆ’ ಎಂದು ಚಿತ್ರದ ಕಥಾಹಂದರ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು. ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ “ಕಪೋ ಕಲ್ಪಿತ’ ಚಿತ್ರದಲ್ಲಿ ಪ್ರೀತಂ ಮಕ್ಕಿಹಾಲಿ, ಸಂದೀಪ್ ಮಲಾನಿ, ಶಿವರಾಜ್ ಕರ್ಕೇರ, ಗೌರೀಶ್ ಅಕ್ಕಿ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ, ದೀಕ್ಷಿತ್ ಗೌಡ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸವ್ಯಸಾಚಿ ಕ್ರಿಯೇಶನ್ಸ್’ ಮತ್ತು “ಅಕ್ಷರ ಪೊ›ಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಮೇಶ್ ಚಿಕ್ಕೇಗೌಡ, ಕವಿತಾ ಕನ್ನಿಕಾ ಪೂಜಾರಿ, ಗಣಿದೇವ್ ಕಾರ್ಕಳ ಬಂಡವಾಳ ಹೂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಈಗಾಗಲೇ “ಕಪೋ ಕಲ್ಪಿತಂ’ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಒಟ್ಟಾರೆ ಹೊಸಬರ “ಕಪೋ ಕಲ್ಪಿತಂ’ ಥಿಯೇಟರ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತದೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.