ನವದೆಹಲಿ: ಮುಂದಿನ ತಿಂಗಳು ಅರಬ್ ರಾಷ್ಟ್ರದಲ್ಲಿ ನಡೆಯಲಿರುವ 2021ನೇ ಸಾಲಿನ ಐಪಿಎಲ್ ಪಂದ್ಯಾವಳಿಯ ಕೆಲ ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ಎಲ್ಲಾ ಐಪಿಎಲ್ ತಂಡದ ಆಟಗಾರರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.
ಆಟಗಾರ ಸಿಕ್ಸರ್ ಬಾರಿಸಿದ ವೇಳೆ ಚೆಂಡು ಮೈದಾನದಿಂದ ಹೊರಗೆ ಬಿದ್ದಲ್ಲಿ ಆ ಚೆಂಡನ್ನು ಫೋರ್ಥ್ ಅಂಪೈರ್ ಬದಲಾಯಿಸಬೇಕು ಹಾಗೂ ಸ್ಯಾನಿಟೈಸ್ ಮಾಡಬೇಕು ಎಂದು ಬಿಸಿಸಿಐ ಹೇಳಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ನಿಯಮಾವಳಿಯನ್ನು ಜಾರಿಗೆ ತರಲಾಗಿದೆ. ಒಂದು ಸಣ್ಣ ಅಜಾಗರೂಕತೆಯೂ ಆಗಬಾರದು ಎಂಬ ಕಾರಣಕ್ಕೆ ಸಣ್ಣ ಸಣ್ಣ ವಿಷಯಗಳ ಮೇಲೂ ಗಮನ ಹರಿಸಲಾಗಿದೆ’ ಎಂದು ಬಿಸಿಸಿಐ ತಿಳಿಸಿದೆ.
ಮೈದಾನದಲ್ಲಿ ಉಗುಳದಂತೆ ಎಚ್ಚರಿಕೆ:
ವಾಶ್‌ರೂಮ್ ಹೊರತುಪಡಿಸಿ ಪ್ರತಿಯೊಬ್ಬರ ಆಟಗಾರನೂ ಎಂಜಲು, ಮೂಗಿನ ದ್ರವ ಹಾಗೂ ನೀರನ್ನು ಕುಡಿದು ಮೈದಾನಲ್ಲಿ ಉಗುಳುವಂತಿಲ್ಲ ಎಂದು ಬಿಸಿಸಿಐ ಎಲ್ಲ ಐಪಿಎಲ್ ತಂಡಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಜತೆಗೆ ತಂಡದ ಪ್ರತಿಯೊಬ್ಬ ಸದಸ್ಯರೂ ಟಿಶ್ಯೂ ಪೇಪರ್ ಹೊಂದಿರಬೇಕು ಹಾಗೂ ಅದನ್ನು ನಿಗದಿಪಡಿಸಲಾದ ಕಸದಬುಟ್ಟಿಯಲ್ಲೇ ಎಸೆಯಬೇಕು. ಇನ್ನು ಆಟಗಾರರಿಗೆ ನೀರು ನೀಡುವ ವಾಟರ್ ಬಾಯ್‌ಗಳು ಕೈಗಳಿಗೆ ಗ್ಲೌಸ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.
6 ದಿನ ಐಸೋಲೇಸನ್ ಕಡ್ಡಾಯ:
ಐಪಿಎಲ್ ಪಂದ್ಯದಲ್ಲಿ ಭಾಗಿಯಾಗಲಿರುವ ಪ್ರತಿಯೊಬ್ಬ ಸದಸ್ಯರಿಗೂ 6 ದಿನಗಳ ಐಸೋಲೇಷನ್ ಕಡ್ಡಾಯವಾಗಿ ಇರಲಿದೆ. ಜೈವಿಕ ವಯಕ್ಕೆ ಎಂಟ್ರಿ ಕೊಡುವ ಮುನ್ನ ಮೂರು ನೆಗೆಟಿವ್ ವರದಿ ಹೊಂದಿರಬೇಕು ಎಂದು ಷರತ್ತು ವಿಧಿಸಲಾಗಿದೆ.