ನವದೆಹಲಿ:ವಾರಣಾಸಿಯಲ್ಲಿರುವ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸುವ ಭಕ್ತರಿಗೆ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಜಾರಿಗೆ ತರಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇನ್ಮುಂದೆ ಭಕ್ತರು ಗರ್ಭಗುಡಿಯೊಳಗೆ ಇರುವ ಜ್ಯೋರ್ತಿಲಿಂಗವನ್ನು ಮುಟ್ಟ (ಸ್ಪರ್ಶ ದರ್ಶನ್) ಬೇಕಾದರೆ ಧೋತಿ ಮತ್ತು ಕುರ್ತಾ ಧರಿಸುವುದು ಕಡ್ಡಾಯ ಎಂದು ಹೇಳಿದೆ. ಕಾಶೀ ವಿದ್ವತ್ ಪರಿಷತ್ ಜತೆಗೆ ದೇವಾಲಯದ ಆಡಳಿತ ಮಂಡಳಿ ಸಭೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿರುವುದಾಗಿ ವರದಿ ವಿವರಿಸಿದೆ.
ಪ್ಯಾಂಟ್ಸ್, ಶರ್ಟ್ಸ್ ಮತ್ತು ಜೀನ್ಸ್ ಧರಿಸಿ ಆಗಮಿಸುವ ಭಕ್ತರಿಗೆ ದೂರದಲ್ಲಿಯೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಆದರೆ ಅವರನ್ನು ಗರ್ಭಗುಡಿಯೊಳಗೆ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಕಾಶಿ ವಿಶ್ವನಾಥ ದೇವಾಲಯದ ಸ್ಪರ್ಶ ದರ್ಶನ್ ಸಮಯವನ್ನು ಇನ್ಮುಂದೆ ಬೆಳಗ್ಗೆ 11ಗಂಟೆವರೆಗೆ ವಿಸ್ತರಿಸಲು ಪ್ರೊ.ರಾಮಚಂದ್ರ ಪಾಂಡೆ ಹಾಗೂ ಪರಿಷತ್ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಸ್ಪರ್ಶ ದರ್ಶನಕ್ಕೆ ಡ್ರೆಸ್ ಕೋಡ್ ಕಡ್ಡಾಯ ಎಂದು ಸಮಿತಿ ನಿರ್ಧರಿಸಿದೆ.
ಪುರುಷ ಭಕ್ತರಿಗೆ ಧೋತಿ, ಕುರ್ತಾ ಹಾಗೂ ಮಹಿಳಾ ಭಕ್ತರಿಗೆ ಸೀರೆ ಕಡ್ಡಾಯ ಎಂದು ಸಮಿತಿ ಹೇಳಿದೆ. ಅಲ್ಲದೇ ದೇವಾಲಯದ ಅರ್ಚಕರಿಗೂ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಲು ಪರಿಷತ್ ಸದಸ್ಯರು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.