Advertisement

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

01:54 AM Dec 26, 2024 | Team Udayavani |

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಈಗಾಗಲೇ ಖ್ಯಾತಿ ಪಡೆದಿರುವ ರಾಜ್ಯದ ನಂದಿನಿ ಬ್ರಾಂಡ್‌ ಇದೇ ಮೊದಲ ಬಾರಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರೋಟಿನ್‌ ಆಧಾರಿತ ನಂದಿನಿ ಇಡ್ಲಿ/ದೋಸೆ ಹಿಟ್ಟನ್ನು ಪರಿಚಯಿಸಿದ್ದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

Advertisement

ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಾಲ ಕಾಲಕ್ಕೆ ಅನುಗುಣವಾಗಿ ಕೆಎಂಎಫ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹಾಗೂ ಇನ್ನಿತರೆ ಅಗತ್ಯ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರ ಭಾಗವಾಗಿ ಈಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಪರಿಚಯಿಸಲಾಗಿದೆ. ನಗರ ಪ್ರದೇಶಗಳಲ್ಲಿ ಕೆಲಸದ ಒತ್ತಡದಿಂದಾಗಿ ಬಹುತೇಕರು ನಿತ್ಯ ಆಹಾರವನ್ನು ಮನೆಯಲ್ಲೇ ತಯಾರಿಸಲು ಸಿದ್ಧ ಆಹಾರಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡು ಕೆಎಂಎಫ್ ಅರೋಗ್ಯಕರ ಇಡ್ಲಿ, ದೋಸೆ ಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ತೀರ್ಮಾನಿಸಿದೆ.

ಪ್ರಪ್ರಥಮ ಬಾರಿಗೆ ಇಡ್ಲಿ/ದೋಸೆ ಹಿಟ್ಟಿನಲ್ಲಿ ಪ್ರೋಟಿನ್‌ ಅಂಶವನ್ನು ಶೇ. 5ರ ಪ್ರಮಾಣದಲ್ಲಿ ಮಿಶ್ರಣಗೊಳಿಸಿ ವಿನೂತನ ಶೈಲಿಯ ವೇ ಪ್ರೋಟಿನ್‌ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಬೆಂಗಳೂರಲ್ಲಿ ಪ್ರಾಯೋಗಿಕ ಬಿಡುಗಡೆ
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರಾಂಡ್‌ನ‌ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಎರಡು ವಿವಿಧ ಪ್ಯಾಕ್‌ಗಳಲ್ಲಿ ಅಂದರೆ 400 ಗ್ರಾಂಗೆ 40 ರೂ. ಹಾಗೂ 900 ಗ್ರಾಂಗೆ 80 ರೂ. ಗರಿಷ್ಠ ಮಾರಾಟ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬಳಿಕ ಮಾರುಕಟ್ಟೆಯಲ್ಲಿ ಗ್ರಾಹಕರ ಪ್ರತಿಕ್ರಿಯೆ ಅವಲೋಕಿಸಿ, ಉಳಿದ ನಗರಗಳಿಗೂ ವಿಸ್ತರಿಸುವ ಯೋಜನೆ ಹೊಂದಿದೆ.

ಉತ್ಪನ್ನಗಳ ಬಿಡುಗಡೆ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಶುಸಂಗೋಪನೆ ಸಚಿವ ವೆಂಕಟೇಶ್‌, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್‌, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next