ಯಾದಗಿರಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯಡಿಯಾಪುರಗೆ ಜಿಪಂ ಅಧ್ಯಕ್ಷ ಗಾದಿ ಒಲಿದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿ ತೀವ್ರ ಮುಖಭಂಗ ಎದುರಿಸುವಂತಾಯಿತು.
ಕಾಂಗ್ರೆಸ್‌ನಲ್ಲಿ ಜಿಪಂ ಅಧ್ಯಕ್ಷರಾಗುವ ಪೈಪೋಟಿಯಲ್ಲಿ ತಮ್ಮನ್ನು ಸೈಡ್‌ಲೈನ್ ಮಾಡಿ ಅವಕಾಶ ತಪ್ಪಿಸಿಲಾಗಿದೆ ಎಂದು ಸುರಪುರ ತಾಲೂಕು ಅರಕೇರಾ(ಜೆ) ಸದಸ್ಯ ಬಸನಗೌಡ ಪಾಟೀಲ ಯಡಿಯಾಪುರ ಹಾಗೂ ಗೋಗಿ ಜಿಪಂ ಸದಸ್ಯ ಕಿಶನ ರಾಠೊಡ ಬಂಡಾಯ ಎದ್ದು ಕಮಲಕ್ಕೆ ಜೈ ಎಂದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶಹಾಪುರ ತಾಲೂಕು ಸಗರ ಜಿಪಂ ಸದಸ್ಯೆ ಶರಣಮ್ಮ ನಾಗಪ್ಪ ನಾಮಪತ್ರ ಸಲ್ಲಿಸಿದರು. ಬಸಣ್ಣಗೌಡ ಯಡಿಯಾಪುರ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ 22 ಸದಸ್ಯರು ಹಾಜರಿದ್ದು, ಮತಚಲಾಯಿಸಿದರು. ಯಡಿಯಾಪುರ ಪರ 12 ಮತಗಳು ಚಲಾವಣೆಯಾದರೆ, ಕಾಂಗ್ರೆಸ್‌ನ ಶರಣಮ್ಮ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ 10 ಮತ ಪಡೆದರು. 2 ಮತಗಳಿಂದ ಅಧ್ಯಕ್ಷರಾಗಿ ಯಡಿಯಾಪುರ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ| ಎನ್.ವಿ. ಪ್ರಸಾದ ಕಾರ್ಯನಿರ್ವಹಿಸಿ ಅಧ್ಯಕ್ಷ ಘೋಷಣೆ ಮಾಡಿದರು.
ಯಡಿಯಾಪುರ ಅಧ್ಯಕ್ಷರಾಗಿ ಘೋಷಣೆಯಾಗುತ್ತಿದಂತೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಸಿದರು. ನಂತರ ಸ್ಥಳಿಯ ಶಾಸಕ ವೆಂಕಟರಡ್ಡಿ ಮುದ್ನಾಳ ಜನಸಂಪರ್ಕ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಶಾಸಕರಾದ ನರಸಿಂಹ ನಾಯಕ, ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ, ಗುರುಪಾಟೀಲ ಶಿರವಾಳ, ಎಚ್.ಸಿ. ಪಾಟೀಲ, ರಾಜಾ ಹನುಮಪ್ಪ ನಾಯಕ, ಸಿದ್ದಣಗೌಡ ಕಾಡಂನೋರ, ಕಿಶನ ರಾಠೊಡ, ಬಸವರಾಜ ಚಂಡ್ರಕಿ, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ, ರಮೇಶ ದೊಡ್ಮನಿ ಇದ್ದರು.