Advertisement

ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ: ಡಾ|ಹೆಗಡೆ

11:23 PM Feb 17, 2022 | Team Udayavani |

ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ (ಡಾ| ಜಿ.ಎಲ್‌. ಹೆಗಡೆ) ಅವರನ್ನು ಸರಕಾರ ನೇಮಕ ಮಾಡಿದೆ. ಅಧಿಕಾರಾವಧಿ ಒಂದು ವರ್ಷವಷ್ಟೇ ಬಾಕಿ ಉಳಿದಿದೆಯಾದರೂ ಅವಧಿಯಲ್ಲಿ ಯಕ್ಷಗಾನ ಕಲೆ ಮತ್ತು ಕಲಾವಿದರ ಏಳಿಗೆಗೆ ಶ್ರಮಿಸುವ ಮಹತ್ವಾಕಾಂಕ್ಷೆ ಹೆಗಡೆ ಅವರದ್ದಾಗಿದೆ. ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಅಕಾಡೆಮಿಯ ಮೂಲಕ ಕಲೆಯ ಬೆಳವಣಿಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಕೈಗೊಳ್ಳಲುದ್ದೇಶಿಸಿರುವ ಯೋಜನೆಗಳು ಮತ್ತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

Advertisement

ಅಕಾಡೆಮಿ ಅಧ್ಯಕ್ಷ  ಸ್ಥಾನ ನಿರೀಕ್ಷಿತವೇ?

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಲಭಿಸಿದೆ. ಆದರೆ ಈಗ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೇರಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ.

ಕೇವಲ ಒಂದು ವರ್ಷದ ಅಧಿಕಾರಾವಧಿಯಲ್ಲಿ  ಬದಲಾವಣೆ ಮಾಡಲು ಸಾಧ್ಯವೇ?

ಇಚ್ಛಾಶಕ್ತಿ ಪೂರಕವಾಗಿದ್ದರೆ ಅವಧಿ ಮುಖ್ಯವಲ್ಲ. ಪ್ರಸ್ತುತ ಇರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಕಲಾವಿದರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಜಾರಿಗೆ ತರಲು ಗಮನ ಹರಿಸುತ್ತೇನೆ.

Advertisement

ಅಕಾಡೆಮಿ ವತಿಯಿಂದ ಹೊಸ ಯೋಜನೆಯನ್ನು  ಆರಂಭಿಸಬೇಕು ಎನ್ನುವ  ಆಕಾಂಕ್ಷೆ ಇದೆಯೇ?

ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ರಾಜ್ಯ, ವಿಶ್ವ ಮಟ್ಟದ ಸಾಹಿತ್ಯ ಸಮ್ಮೇಳಗಳು ನಡೆಯುತ್ತವೆ. ಆದರೆ ಈ ಸಮ್ಮೇಳನಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರದ ವತಿಯಿಂದ ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ನಡೆಯಬೇಕು. ಈ ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯ, ಯಕ್ಷ ಸಾಹಿತಿಗಳು, ಪ್ರಸಂಗಕರ್ತರು, ಪ್ರಸಂಗಗಳು, ವೇಷಭೂಷಣ, ವೇಷಧಾರಿಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಬೇಕು. ಇದರ ಜತೆಯಲ್ಲಿ ಮೂಡಲಪಾಯ, ಗಟ್ಟಡಕೋರೆ ಮುಂತಾದ ಕಲೆಗಳ ಬಗ್ಗೆಯೂ ಚರ್ಚೆ ನಡೆಯಬೇಕು. ಇದರಿಂದ ಯಕ್ಷಗಾನ ಕಲೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ.

ಯಕ್ಷಗಾನ ಅಕಾಡೆಮಿಗೆ ವಾರ್ಷಿಕ ಅನುದಾನವಿರುವುದು 60 ಲಕ್ಷ ರೂ., ಇದರಿಂದ ನಿಮ್ಮೆಲ್ಲ ಯೋಜನೆಗಳು, ಚಿಂತನೆಗಳನ್ನು ಸಾಕಾರಗೊಳಿಸಲು ಸಾಧ್ಯವೇ?

ಈ ಅನುದಾನ ಖಂಡಿತ ಸಾಕಾಗದು. ಈ ಅನುದಾನದಲ್ಲಿಯೇ ಕಚೇರಿ ನಿರ್ವಹಣೆ, ಸಿಬಂದಿಗೆ ಸಂಬಳ, ಅಕಾಡೆಮಿಯ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಅಕಾಡೆಮಿಗೆ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ.

ಸರಕಾರದಿಂದ ಯಕ್ಷಗಾನ ಅಕಾಡೆಮಿಗೆ ಸಹಕಾರ ಸಿಗುತ್ತಿದೆಯೇ?

ಸರಕಾರದಿಂದ ಪೂರ್ಣ ಸಹಕಾರ ಲಭಿಸುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯವರಾದ ಸುನಿಲ್‌ ಕುಮಾರ್‌ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಕಲೆಯ ಬಗ್ಗೆ ವಿಶೇಷ ಗೌರವವಿರುವ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಟಾರ್‌, ಅಂಗಾರ ಅವರು ಸರಕಾರದಲ್ಲಿ ಸಚಿವರಾಗಿರುವುದು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಹಕಾರ ಇರುವುದರಿಂದ ಅಕಾಡೆಮಿಯ ಮೂಲಕ ಹೆಚ್ಚಿನ ಕೆಲಸಕಾರ್ಯಗಳನ್ನು ಮಾಡುವ ಇರಾದೆ ಇದೆ.

ಹಿಂದಿನ ಅಧ್ಯಕ್ಷರ ಅವಧಿಯ ಯಾವೆಲ್ಲ ಕಾರ್ಯಕ್ರಮಗಳನ್ನು ಮುಂದುವರಿಸುತ್ತೀರಿ?

ಅಕಾಡೆಮಿಯ ಹಿಂದಿನ ಅಧ್ಯಕ್ಷರು ಅವಧಿಯಲ್ಲಿ ಕೈಗೆತ್ತಿಕೊಂಡ ಎಲ್ಲ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ಅದರಲ್ಲೂ ಮುಖ್ಯವಾಗಿ ಯಕ್ಷಗಾನ ವಿಶ್ವಕೋಶವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕಿದೆ.

ಎಲ್ಲ ತಿಟ್ಟುಗಳಿಗೆ ಸಮಾನ ನ್ಯಾಯ ಒದಗಿಸುತ್ತೀರಾ? ಮೂಡಲಪಾಯದ ಬೆಳವಣಿಗೆಗೆ ಯೋಜನೆ ರೂಪಿಸುತ್ತೀರಾ?

ಮೂಲಭೂತವಾಗಿ ಯಕ್ಷಗಾನದ ತಿಟ್ಟುಗಳ ನಡುವೆ ಇರುವ ಒಂದಷ್ಟು ವ್ಯತ್ಯಾಸವನ್ನು ಹೊರತುಪಡಿಸಿದರೆ ಎಲ್ಲವೂ ಒಂದೇ. ಹೀಗಾಗಿ ಯಕ್ಷಗಾನ ಕಲೆಗೆ ನ್ಯಾಯ ಒದಗಿಸುವಾಗ ಎಲ್ಲ ತಿಟ್ಟುಗಳಿಗೂ ನ್ಯಾಯ ಸಿಕ್ಕೇ ಸಿಗುತ್ತದೆ. ಮೂಡಲಪಾಯ ಕೂಡ ಯಕ್ಷಗಾನ ಅಕಾಡೆಮಿಯ ಭಾಗವಾಗಿದೆ. ಈ ಕಲೆಯ ಕುರಿತು ನನಗೆ ಒಂದಷ್ಟು ಕಲ್ಪನೆಗಳಿವೆ. ಹಿರಿಯರ ಮಾರ್ಗದರ್ಶನ ಪಡೆದು ಇದರ ಬೆಳವಣಿಗೆಗೂ ಶ್ರಮಿಸುತ್ತೇನೆ.

ಕಲೆಯ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ?

ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯವಶ್ಯಕವಾಗಿ ಬೇಕು. ಹೀಗಾಗಿ ಅಕಾಡೆಮಿ ಸಂಗ್ರಹದಲ್ಲಿರುವ ಹಳೆಯ ಪ್ರಾತ್ಯಕ್ಷಿಕೆ ಮುಂತಾದ ದೃಶ್ಯಮುದ್ರಿಕೆಗಳನ್ನು ಯೂಟ್ಯೂಬ್‌, ಪೇಸ್‌ಬುಕ್‌ ಮುಂತಾದ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು. ಕಲಾವಿದರ ಪರಿಚಯ ಮಾಡಿಕೊಡಲಾಗುವುದು. ಕಲಾವಿದರಿಗೆ ಅಕಾಡೆಮಿ ಕುರಿತು ಮಾಹಿತಿ, ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವ್ಯವಸ್ಥೆ ಮಾಡಲಾಗುವುದು.

ಕಲಾವಿದರ ಹಿತದೃಷ್ಟಿಯ ರಕ್ಷಣೆಗೆ ನಿಮ್ಮ ಚಿಂತನೆ, ಯೋಚನೆಗಳೇನು?

ಯಕ್ಷಗಾನ ಕಲಾವಿದರಿಗೆ ವೃದ್ಧಾಪ್ಯದಲ್ಲಿ ಜೀವನ ಸಾಗಿಸಲು ಸರಕಾರ ನೀಡುತ್ತಿರುವ ಮಾಸಾಶನ ಸಾಕಷ್ಟು ನೆರವಾಗುತ್ತಿದೆ. ಅದು ಸಕಾಲದಲ್ಲಿ ಸಿಗಬೇಕು, ಫ‌ಲಾನುಭವಿಗಳ ಆಯ್ಕೆ ಕ್ಷಿಪ್ರವಾಗಿ ನಡೆಯಬೇಕು. ಮಾಸಾಶನ ಮೊತ್ತ ಐದು ಸಾವಿರ ರೂ.ಗಳಿಗೆ ಏರಿಕೆಯಾಗಬೇಕು. ಪ್ರಸ್ತುತ ವೃತ್ತಿ ಮೇಳದಲ್ಲಿ ಸೇವೆ ಸಲ್ಲಿಸುವ ಕಲಾವಿದರನ್ನು ಗುರುತಿಸಲು ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ ವಿಶ್ವಕೋಶದಲ್ಲಿ ಎಲ್ಲ ಕಲಾವಿದರನ್ನು ಗುರುತಿಸುವ ಕೈಪಿಡಿ ರೂಪಿಸಬೇಕು ಎನ್ನುವ ಕನಸಿದೆ.

 

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next