Advertisement

ಮಧುರಾ ಶಿವಾನಂದ್‌ ಸಾಗರ ನಗರಸಭೆ ಅಧ್ಯಕ್ಷೆ

08:21 PM Oct 30, 2020 | Suhan S |

ಸಾಗರ: ಚುನಾವಣೆ ನಡೆದ 16 ತಿಂಗಳ ನಂತರ ಸಾಗರ ನಗರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆದಿದೆ. ಇದರಿಂದ ಮುಂದಿನ ಐದು ವರ್ಷಗಳ ಕಾಲ ಈ ಜನಪ್ರತಿನಿಧಿ ಗಳು ಆಳ್ವಿಕೆ ಮಾಡಲಿದ್ದು, ಅಧ್ಯಕ್ಷರಾಗಿ ಬಿಜೆಪಿಯ ಮಧುರಾ ಶಿವಾನಂದ್‌, ಉಪಾಧ್ಯಕ್ಷರಾಗಿ ವಿ. ಮಹೇಶ್‌ ಅವರು ಚುನಾವಣೆ ಮೂಲಕ ಆಯ್ಕೆಯಾದರು.

Advertisement

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕ ಬಿಸಿಎಂ- ಎ ಮೀಸಲಾತಿ ನಿಗದಿಪಡಿಸಲಾಗಿತ್ತು. ಮೀಸಲಾತಿ ಸ ಬಂಧ ರಾಜ್ಯದ ಕೆಲವು ಕಡೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂಕ್ಷಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು. ಆದರೆ ನ್ಯಾಯಾಲಯ ನ. 2ರೊಳಗೆ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆದಿದೆ.

ಸಾಗರ ನಗರಸಭೆಯ 31 ಸದಸ್ಯ ಬಲದಲ್ಲಿ ಬಿಜೆಪಿ 16, ಕಾಂಗ್ರೆಸ್‌ 9, ಜೆಡಿಎಸ್‌ 1 ಹಾಗೂ ಐವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಈ ಪೈಕಿ ಡಿ. ತುಕಾರಾಮ್‌ ಈಚೆಗೆ ಬಿಜೆಪಿ ಸೇರಿದ್ದರಿಂದ ಬಿಜೆಪಿ ಸದಸ್ಯ ಬಲ 17ಕ್ಕೆ ಏರಿಕೆಯಾಗಿತ್ತು. ಮಧುರಾ  ಶಿವಾನಂದ್‌ ಮತ್ತು ವಿ. ಮಹೇಶ್‌ ಅವರಿಗೆ 21 ಮತಗಳು ಬಿದ್ದಿವೆ. ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಪಕ್ಷೇತರರಾಗಿ ಗೆದ್ದವರೂ ಬಿಜೆಪಿಗೆ ಮತ ಹಾಕಿರುವುದು ಇದರಿಂದ ವ್ಯಕ್ತವಾಗಿದೆ. ಬಿಜೆಪಿಯ 17 ಸದಸ್ಯರ ಜೊತೆ ನಾಲ್ವರು ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮಧುಮಾಲತಿ ಕಲ್ಲಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಶಾಹಿನಾ ಬಾನುಸ್ಪರ್ಧೆ ಮಾಡಿದ್ದು, ತಲಾ 9 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ ಸದಸ್ಯ ಸೈಯದ್‌ ಜಾಕೀರ್‌ ತಟಸ್ಥರಾಗಿ ಉಳಿದರು.

ಬಹುಮತವಿದ್ದರೂ ನಡೆದ ಡ್ರಾಮಾ!: ಬಿಜೆಪಿಗೆ ಸರಳ ಬಹುಮತ ಇದ್ದರೂ ಕಾಂಗ್ರೆಸ್‌ ಪಕ್ಷ ತನ್ನ 9 ಸದಸ್ಯರು, ಜೆಡಿಎಸ್‌ನ ಓರ್ವ ಸದಸ್ಯರು, ನಾಲ್ವರು ಪಕ್ಷೇತರರು ಸೇರಿದಂತೆ 14 ಸದಸ್ಯ ಬಲದೊಂದಿಗೆ ಕೆಲವು ಬಿಜೆಪಿ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆಸಿದೆ ಎಂಬ ಅನುಮಾನ ವ್ಯಕ್ತವಾಯಿತು. ಕಾಂಗ್ರೆಸ್‌ನ ಕೆಲವು ಮುಖಂಡರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದನ್ನು ಅರಿತುಕೊಂಡ ಬಿಜೆಪಿ ಪ್ರಮುಖರು ತನ್ನ 17 ಸದಸ್ಯರನ್ನು ಜೋಗ ಪ್ರವಾಸಿ ಮಂದಿರಕ್ಕೆ ಬುಧವಾರ ಕರೆದುಕೊಂಡು ಹೋಗಿ ವಾಪಸ್‌ ಕರೆತರುವ ತಂತ್ರಗಾರಿಕೆಯನ್ನು ಅನುಸರಿಸಿತು. ಚುನಾವಣಾಧಿಕಾರಿಗಳಾಗಿ ಸಹಾಯಕ ಆಯುಕ್ತ ಡಾ| ನಾಗರಾಜ್‌ ಎಲ್‌. ಕಾರ್ಯ ನಿರ್ವಹಿಸಿದರು.

ಪೌರಾಯುಕ್ತ ಎಚ್‌.ಕೆ. ನಾಗಪ್ಪ ಇದ್ದರು. ಶಾಸಕ ಎಚ್‌. ಹಾಲಪ್ಪ ಹರತಾಳು, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್‌ ಬಿಳಿಸಿರಿ, ಎಪಿಎಂಸಿ ಅಧ್ಯಕ್ಷ ಚೇತನರಾಜ್‌ ಕಣ್ಣೂರು, ಪ್ರಮುಖರಾದ ಸಂತೋಷ್‌ ಶೇಟ್‌, ದೇವೇಂದ್ರಪ್ಪ ಯಲಕುಂದ್ಲಿ, ಸತೀಶ್‌ ಮೊಗವೀರ, ಯು.ಎಚ್‌. ರಾಮಪ್ಪ, ಬಿ.ಟಿ. ರವೀಂದ್ರ ಇನ್ನಿತರರು ಇದ್ದರು.

Advertisement

ನಗರದ ಅಭಿವೃದ್ಧಿಗೆ ಆದ್ಯತೆ: ಮಧುರಾ :

ಸಾಗರ: ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ಸೂಚನೆಯಂತೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಜನರಿಗೆ ಪೂರಕವಾಗುವ ರೀತಿಯಲ್ಲಿ ಉತ್ತಮ ಆಡಳಿತ ನೀಡಲಾಗುತ್ತದೆ ಎಂದು ನಗರಸಭೆಯ ನೂತನ ಅಧ್ಯಕ್ಷೆ ಮಧುರಾ ಶಿವಾನಂದ್‌ ತಿಳಿಸಿದರು.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ ಅವರು ಪಕ್ಷದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ,ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದರು.

ಶಾಸಕ ಎಚ್‌. ಹಾಲಪ್ಪ ಹರತಾಳು ಪ್ರತಿಕ್ರಿಯಿಸಿ, ಅಧ್ಯಕ್ಷ, ಉಪಾಧ್ಯಕ್ಷರು ಅತ್ಯಂತ ಉತ್ಸಾಹಿಗಳಾಗಿದ್ದು, ಉತ್ತಮ ಆಡಳಿತ ನೀಡುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಪಕ್ಷದಲ್ಲಿ 7 ಜನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರು. ಶ್ರಿಮತಿ ಉದಯ ಅವರು ತಾವು ಸ್ಪರ್ಧಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಏಳು ಜನರಲ್ಲಿ ಸದಸ್ಯರ ಆಯ್ಕೆಯ ಬಗ್ಗೆ ಜಿಲ್ಲೆಯಿಂದ ಬಂದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದರು.

ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್‌ ಅವರನ್ನು ಕೂಡ ಹೊರಗಿರಿಸಿ ಸದಸ್ಯರಂತೆ ಅವರ ಅಭಿಪ್ರಾಯ ಸಂಗ್ರಹಿಸಲಾಯಿತು. ಬಹುಮತದ ತೀರ್ಮಾನವನ್ನು ಅನುಸರಿಸಲಾಗಿದೆ. ಅಧಿಕಾರ ಹಂಚಿಕೆಯ ಯಾವ ಪ್ರಸ್ತಾಪವೂ ಪಕ್ಷಕ್ಕಿಲ್ಲ. ಮುಂದಿನ 10 ವರ್ಷದ ಅಭಿವೃದ್ಧಿ ಗುರಿಯನ್ನು ಹೊಂದಲಾಗಿದೆ. ರಾಜ್ಯೋತ್ಸವದ ನಂತರ ನಗರವನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ನಗರದ ಪ್ರಮುಖರ ಸಮಾಲೋಚನಾ ಸಭೆ ಕರೆಯಲಾಗುತ್ತದೆ. ಬಿ.ಎಚ್‌. ರಸ್ತೆ ಅಗಲೀಕರಣ, ಸೊರಬ ರಸ್ತೆ ಅಗಲೀಕರಣ, ಗಣಪತಿ ಕೆರೆ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ನಗರದ ಅಭಿವೃದ್ಧಿಗೆ ನನ್ನ ಅನುದಾನದ ಜೊತೆಗೆ ಸಂಸದರ ಅನುದಾನವನ್ನು ಸಹ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌, ಈಗಾಗಲೇ ಸೊರಬ ಪಪಂನಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದಿದೆ. ಸಾಗರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾರ್ಗಲ್‌ ಪಪಂನಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯ ಉಳಿದ ಪಪಂ, ಪುರಸಭೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next