ಕಾರವಾರ: ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಹ ಹೊಸ ರಾಜಕೀಯ ಪರ್ವ ಆರಂಭವಾಗಲಿದೆ. ಕರ್ನಾಟಕದ ಮಣ್ಣಿಗೆ ನ್ಯಾಯ, ಗೌರವ ಕೊಡುವಂತಹ, ಇಲ್ಲಿನ ಜನರ ಬದುಕಿಗೆ ಭರವಸೆ ಕೊಡುವಂತಹ ರಾಜಕೀಯವನ್ನು ಬಿಜೆಪಿ ಮಾಡಲಿದೆ. ಅಂಥ ಸರ್ಕಾರ ಬರಲಿದೆ ಎಂಬ ವಿಶ್ವಾಸವನ್ನು ಉತ್ತರ ಕನ್ನಡದಿಂದ ಆರನೇ ಬಾರಿಗೆ ಆಯ್ಕೆಯಾದ ಸಂಸದ ಅನಂತಕುಮಾರ್ ಹೆಗಡೆ ವ್ಯಕ್ತಪಡಿಸಿದರು.
ಬದಲಾಗುತ್ತಿರುವ ಇವತ್ತಿನ ಪ್ರಸಕ್ತ ವಿದ್ಯಾಮಾನಕ್ಕೆ ಭಾರತವನ್ನು ತೆಗೆದುಕೊಂಡು ಹೋಗಬೇಕಿದೆ. ಚುನಾವಣೆಯಲ್ಲಿ ನಾವು ಇಟ್ಟ ವಿಚಾರಗಳಿಗೆ ಜನರು ಅದಕ್ಕೆ ಬೆಂಬಲ ನೀಡಿದ್ದಾರೆ. ಹಾಗಾಗಿ ಮೋದಿ ಸರ್ಕಾರ ಹೊಸ ಆಡಳಿತ ನೀಡಲಿದೆ. ದೇಶಕ್ಕಾಗಿ ರಾಜಕೀಯ ಮಾಡಬೇಕೆಂಬ ವಾತಾವರಣ ಇದೆ. ಈ ಸಂಪ್ರದಾಯ ಬೆಳೆಯುತ್ತಿದೆ. ಜನರು ಜಾಗೃತರಾಗಿದ್ದಾರೆ. ಧನಾತ್ಮಕ ಬದಲಾವಣೆ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಜನರು ತಮ್ಮ ನಿಲುವು ತಿಳಿಸಿದ್ದಾರೆ. 25 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಜನ ಇದ್ದಾರೆ. ಕರ್ನಾಟಕದ ರಾಜಕೀಯ ದಿಕ್ಕು ಬದಲಾಗುತ್ತಿದೆ. ಹೇಗಾದರೂ ಗೆಲ್ಲಬೇಕು, ದರ್ಬಾರು ಮಾಡಬೇಕು ಎಂಬ ರಾಜಕಾರಣ ಮರೆಯಾಗುತ್ತಿದೆ. ದೇಶಕ್ಕಾಗಿ ರಾಜಕಾರಣ ಎಂಬ ನಿಲುವಿಗೆ ಜನ ಮತ ನೀಡಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಅನಂತಕುಮಾರ್ ಹೆಗಡೆ ಹೇಳಿದರು.
Advertisement
ಕುಮಟಾದಲ್ಲಿ ಅವರು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಅವರಿಂದ ಗೆಲುವಿನ ಪ್ರಮಾಣ ಪತ್ರ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕೇಂದ್ರದಲ್ಲಿ ಮೋದಿ ಅವರು ದೇಶ ಕೇಂದ್ರಿತ, ಜನ ಕೇಂದ್ರಿತ, ಸೇವಾ ಕೇಂದ್ರಿತ, ಸೀಮಾ ಕೇಂದ್ರಿತ ಆಡಳಿತವನ್ನು ಕಳೆದ ಐದು ವರ್ಷಗಳಲ್ಲಿ ನೀಡಿದ್ದಾರೆ. ಅವರ ನೇತೃತ್ವದಲ್ಲಿ ನಾವು ಮುಂದಿನ ತಲೆಮಾರು ನೆನಪಿಡುವಂತಹ ಕಾರ್ಯಕ್ರಮಗಳನ್ನು ನೀಡಲಿದ್ದೇವೆ. ಮುಂದಿನ ದಿನಗಳಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದರು.