ಉಪ್ಪಿನಂಗಡಿ: ಶತಮಾನ ಕಂಡಿದ್ದ ಉಪ್ಪಿನಂಗಡಿ ಹಳೇ ಪೊಲೀಸ್ ಠಾಣೆಯ ಕಟ್ಟಡವನ್ನು ಕೆಡವಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಠಾಣಾ ಕಟ್ಟಡದ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನನೆಗುದಿಗೆ ಬೀಳುವಂತಾಗಿದೆ. ತ್ವರಿತಗತಿಯಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದೆಂದು ಭರವಸೆ ನೀಡಿ, ಎಂಟು ತಿಂಗಳ ಹಿಂದೆ ಹಳೇ ಕಟ್ಟಡವನ್ನು ಕೆಡವಲಾಗಿತ್ತು. ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸನಿಹದಲ್ಲಿರುವ ವೃತ್ತ ನಿರೀಕ್ಷಕರ ವಸತಿ ಗೃಹಕ್ಕೆ ವರ್ಗಾಯಿಸಲಾಗಿತ್ತು. ಬಳಿಕ ಕರ್ನಾಟಕ ರಾಜ್ಯ ಗೃಹ ಮಂಡಳಿ ಮೂಲಕ ನೂತನ ಕಟ್ಟಡ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದ್ದು, ಅದರಂತೆ ಕುಂದಾಪುರ ಮೂಲದ ಗುತ್ತಿಗೆದಾರರು ಗೃಹ ಮಂಡಳಿಯ ಮುಖಾಂತರ ಕಾಮಗಾರಿ ನಡೆಸುವ ಗುತ್ತಿಗೆ ಪಡೆದುಕೊಂಡು ಬಹಳಷ್ಟು ವಿಳಂಬಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಕಟ್ಟಡದ ಪಿಲ್ಲರ್ ಗುಂಡಿಗಳನ್ನು ತೋಡಿ ಕಣ್ಮರೆಯಾಗಿದ್ದ ಗುತ್ತಿಗೆದಾರರ ಕಾರ್ಯವೈಖರಿಯ ಬಗ್ಗೆ ಈ ಹಿಂದೆ
‘ಸುದಿನ’ದಲ್ಲಿ ವರದಿಗಳು ಪ್ರಕಟವಾದ ಬಳಿಕ ಪಿಲ್ಲರ್ ಗುಂಡಿಗಳಲ್ಲಿ ಕಬ್ಬಿಣದ ರಾಡ್ ಗಳನ್ನು ಅಳವಡಿಸುವ ಕಾರ್ಯವನ್ನು ಮಾಡಲಾಯಿತು. ಆದರೆ ಅಳವಡಿಸಲಾದ ಕಬ್ಬಿಣ ಪಟ್ಟಿಗಳಿಗೆ ಕಾಂಕ್ರೀಟ್ ಬೆಡ್ ಹಾಕದೇ ಗುತ್ತಿಗೆದಾರರು ಸುಮ್ಮನಾಗಿದ್ದು, ಈ ತನಕ ಕಾಮಗಾರಿ ಒಂದಿನಿತೂ ಪ್ರಗತಿ ಕಾಣದೆ ತಟಸ್ಥವಾಗಿ ಉಳಿದಿದೆ. ಈ ಮಧ್ಯೆ ಮಳೆಗಾಲ ಪ್ರಾರಂಭವಾದ ಕಾರಣದಿಂದ ಪಿಲ್ಲರ್ ಗುಂಡಿಗಳ ಮಣ್ಣು ಕುಸಿದು ಬಿದ್ದು, ಕಬ್ಬಿಣ ಮಣ್ಣಿನಲ್ಲಿ ಹೂತು ಹೋದಂತಿದೆ. ಅಳವಡಿಸಲಾದ ಕಬ್ಬಿಣವು ತುಕ್ಕು ಹಿಡಿದು ಸಾಮರ್ಥ್ಯ ಕುಸಿತಕ್ಕೆ ಸಿಲುಕುವ ಅಪಾಯಕ್ಕೆ ಒಳಗಾಗಿದೆ. ಇದು ಸಾಲದೆಂಬಂತೆ, ಸತತ ಸುರಿದ ಮಳೆಯಿಂದ ಪಿಲ್ಲರ್ ಗುಂಡಿ ತುಂಬಾ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿಯೂ ಪರಿವರ್ತನೆಗೊಂಡಿದೆ.
ಸರಕಾರಿ ಕಾಮಗಾರಿಯೊಂದನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಬದ್ಧತೆಯನ್ನು ತೋರದಿರುವ ಗುತ್ತಿಗೆದಾರರ ನಡೆಯಿಂದಾಗಿ ಮಳೆಗಾಲದ ಮುನ್ನ ಹೊಸ ಪೊಲೀಸ್ ಠಾಣೆಗೆ ಪ್ರವೇಶ ಪಡೆಯಬೇಕೆಂಬ ಕನಸು ಕಂಡಿದ್ದ ಪೊಲೀಸ್ ಅಧಿಕಾರಿಗಳಿಗೆ ನಿರಾಶೆ ಕಾಡಿದೆ. ಪಿಲ್ಲರ್ ಗುಂಡಿಯೊಳಗೆ ಸೂಕ್ತ ಕಾಂಕ್ರೀಟ್ ಬೆಡ್ ಹಾಕದೆ ಪಿಲ್ಲರ್ ಬಾಬ್ತು ಕಬ್ಬಿಣದ ಪಟ್ಟಿಗಳನ್ನು ಅಳವಡಿಸಿದ್ದು, ಅಳವಡಿಸಲಾದ ಕಬ್ಬಿಣವು ಕಡಿಮೆ ಸಾಂದ್ರತೆಯಿಂದ ಕೂಡಿದೆ. ತತ್ಪರಿಣಾಮ ಎಂಜಿನಿಯರಿಂಗ್ ವಿಭಾಗ ಅನುಮೋದಿಸುತ್ತಿಲ್ಲ ಎಂಬ ಮಾಹಿತಿಯೂ ಲಭಿಸಿದ್ದು, ಈಗ ಅಳವಡಿಸಲಾದ ಕಬ್ಬಿಣದ ರಾಡ್‌ಗಳನ್ನು ತೆರವುಗೊಳಿಸಿ ಹೆಚ್ಚಿನ ಸಾಂದ್ರತೆಯ ಕಬ್ಬಿಣದ ಸರಳುಗಳನ್ನು ಅಳವಡಿಸಬೇಕಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಠಾಣೆ ಪ್ರಸಕ್ತ ಇಕ್ಕಟ್ಟಾದ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಯೋಜಿತ ನೂತನ ಠಾಣಾ ಕಟ್ಟಡವು ಉತ್ತಮ ಗುಣಮಟ್ಟದಲ್ಲಿ ತ್ವರಿತವಾಗಿ ನಿರ್ಮಾಣಗೊಂಡರೆ ನಾಗರಿಕ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಸ್ಥಳೀಯರಾದ ಯು. ರಾಜೇಶ್ ಪೈ ಪ್ರತಿಕ್ರಿಯಿಸಿದ್ದಾರೆ.
— ಎಂ.ಎಸ್. ಭಟ್