Advertisement

ನೂತನ ಪಿಂಚಣಿ ಯೋಜನೆ ನೌಕರರಿಗೆ ಶಾಪ

01:25 PM Sep 24, 2018 | Team Udayavani |

ಮಾನ್ವಿ: ನೂತನ ಪಿಂಚಣಿ ಯೋಜನೆಯು ಸರ್ಕಾರಿ ನೌಕರರ ಪಾಲಿಗೆ ಶಾಪವಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ಕರ್ನಾಟಕ ರಾಜ್ಯ ಸರಕಾರಿ ಎನ್‌.ಪಿ.ಎಸ್‌.ನೌಕರರ ಸಂಘದಿಂದ ಪಟ್ಟಣದ ಕಾಕತೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜಿಲ್ಲಾ ಉತ್ತಮ ಶಿಕ್ಷಕರು, ನೌಕರರು ಮತ್ತು ಸಂಘಟನಾಕಾರರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2006ರಿಂದ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ನ್ಯಾಯಯುತವಾದ ಪಿಂಚಣಿ ದೊರೆಯುವುದಿಲ್ಲ. ಇದರಿಂದ ಅವರ ಬದುಕು ಅಡ್ಡಕತ್ತರಿಗೆ ಸಿಲುಕಲಿದೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್‌ ರದ್ದುಪಡಿದುವುದಾಗಿ ಭರವಸೆ ನೀಡಿದ್ದರು. ನೂತನ ಪಿಂಚಣಿ ಯೋಜನೆ ರದ್ದತಿ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇನೆ. ಎನ್‌ಪಿಎಸ್‌ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು. 

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಎನ್‌ಪಿಎಸ್‌ ನೌಕರರ ನ್ಯಾಯಯುತವಾದ ಹೋರಾಟ ಬೆಂಬಲಿಸಿ ಈಗಾಗಲೇ ವಿದಾನಸಭೆಯಲ್ಲಿ ಚರ್ಚಿಸಿದ್ದೇನೆ. ನೂತನ ಎನ್‌ಪಿಎಸ್‌ ಯೋಜನೆ ಅವೈಜ್ಞಾನಿಕವಾಗಿದೆ. ಯೋಜನೆಯಂತೆ ಸರ್ಕಾರಿ ನೌಕರರ ಶೇ.10ರಷ್ಟು ವೇತನ ಕಡಿತ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡುವುದು ಒಂದು ರೀತಿಯಲ್ಲಿ ಜೂಜಿಗೆ ಹಣವಿಟ್ಟಂತೆ.

ಷೇರು ಮಾರುಕಟ್ಟೆ ಯಾವಾಗ ಕುಸಿಯುತ್ತದೆಯೋ? ಯಾವಾಗ ಏರಿಕೆಯಾಗುತ್ತದೋ ಎಂಬುದು ಊಹಿಸುವುದು ಕಷ್ಟ. ಹಾಗಾಗಿ ಸರ್ಕಾರ ಯಾವುದೆ ತಾರತಮ್ಯ ಮಾಡದೆ ನೂತನ ಎನ್‌ಪಿಎಸ್‌ ಯೋಜನೆ ರದ್ದುಗೊಳಿಸಬೇಕು ಎಂದರು. 

Advertisement

ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ಮಾತನಾಡಿ, ನೂತನ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ. 2006ರ ಏಪ್ರಿಲ್‌ 1ರ ನಂತರ ನೌಕರಿಗೆ ಸೇರಿದವರಿಗೆ ನೂತನ ಪಿಂಚಣಿ ಯೋಜನೆ ಅನ್ವಯವಾಗಲಿದೆ. ಇದರ ವ್ಯಾಪ್ತಿಗೆ ಲಕ್ಷಾಂತರ ಸರ್ಕಾರಿ ನೌಕರರು ಒಳಪಡಲಿದ್ದಾರೆ. ಹೊಸ ಪಿಂಚಣಿ ಯೋಜನೆಯಲ್ಲಿ ಜಿಪಿಎಫ್‌ ಸೌಲಭ್ಯ ಇಲ್ಲ. ಅಲ್ಲದೆ ಶೇ.10ರಷ್ಟು ಕಡಿತ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನೌಕರರಿಗೆ ಯಾವುದೆ ಲಾಭವಿಲ್ಲ. ಇದಷ್ಟೆ ಅಲ್ಲದೆ ನೂತನ ಎನ್‌ಪಿಎಸ್‌ನಲ್ಲಿ ಕುಟುಂಬದ ಪಿಂಚಣಿ ಸೇರಿದಂತೆ, ನಿವೃತ್ತಿ ನಂತರ ಹಲವು ಸೌಲಭ್ಯಗಳನ್ನು ಸ್ಥಗಿತಗೊಳ್ಳಲಿವೆ. ಆದ್ದರಿಂದ ನೂತನ  ಎನ್‌ಪಿಎಸ್‌ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಹೋರಾಟ ನಡೆಸಲು ಸಂಘಟನೆ ಹುಟ್ಟಿಕೊಂಡಿದೆ. ಪಿಂಚಣಿ ಭಿಕ್ಷೆಯಲ್ಲ, ನಮ್ಮ ಮೂಲಭೂತ ಹಕ್ಕು ಎಂಬುದನ್ನು ಸರ್ಕಾರ ಮನಗಂಡು ಎನ್‌ಪಿಎಸ್‌ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಶಿಕ್ಷಣ-ಕಲಿಕೆಯ ಪ್ರಕ್ರಿಯೆ ಎಂಬ ವಿಷಯದ ಕುರಿತು ಬೆಂಗಳೂರು ಬಸವನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ| ಎಚ್‌.ಎಸ್‌.ಸತ್ಯನಾರಾಯಣ ಉಪನ್ಯಾಸ ನೀಡಿದರು. ರಾಜ್ಯ ಸಮಿತಿ ಸದಸ್ಯ ಸಂಗಮೇಶ ಮುದೋಳ, ಜೆಡಿಎಸ್‌ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಗೌಡ, ಆಯುಷ್‌ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ| ಶಂಕರಗೌಡ ಎಸ್‌. ಪಾಟೀಲ, ನಾಗನಗೌಡ, ಎನ್‌ಪಿಎಸ್‌ ನೌಕರರ ಸಂಘ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಚಂದ್ರಕಾಂತ ತಳವಾರ, ಕೇಶವ ಪ್ರಸಾದ, ತಾಲೂಕು ಅಧ್ಯಕ್ಷ ಬಸವರಾಜ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಪುರಸಭೆ ಸದಸ್ಯ ರಾಜಾಮಹೇಂದ್ರ ನಾಯಕ, ನಾಗರಾಜ ಭೋಗಾವತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next