ರ್ಯಾಪರ್ ಆಗಿ ವಿಭಿನ್ನ ಶೈಲಿಯ ಹಾಡುಗಳ ಮೂಲಕ ಜನಪ್ರಿಯವಾಗಿರುವ ಅಲೋಕ್ (ಆಲ್ ಓ.ಕೆ) ಈಗ ರೈತರಿಗೆ ನಮನ ಸಲ್ಲಿಸುವ ಸಲುವಾಗಿ “ರೈತ’ ಎಂಬ ಹೆಸರಿನಲ್ಲಿ ಹೊಸ ಮ್ಯೂಸಿಕ್ ಅಲ್ಬಂನ್ನು ಹೊರತಂದಿದ್ದಾರೆ.
ಅನ್ನದಾತರಿಗೆ ಗೀತ ನಮನ ಸಲ್ಲಿಸುವ ಈ ಆಲ್ಬಂ ಸಾಂಗ್ ಅನ್ನು ಸಂಜಯ್ ಗೌಡ ನಿರ್ಮಾಣ ಮಾಡಿದ್ದಾರೆ. ಅಲೋಕ್ (ಆಲ್ ಓ.ಕೆ) ಸಾಹಿತ್ಯ, ಸಂಗೀತ ನೀಡಿ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಸಂಜಯ್ ಗೌಡ ಮತ್ತು ಸೋನು ಗೌಡ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ರೈತ’ ಮ್ಯೂಸಿಕ್ ಅಲ್ಬಂ ಅನ್ನು ಅಲೋಕ್ ಮತ್ತು ತಂಡ ಬಿಡುಗಡೆಗೊಳಿಸಿತು.
“ಸಾಯಿಗೋಲ್ಡ್ ಪ್ಯಾಲೆಸ್’ನ ಮಾಲೀಕ ಟಿ. ಎ ಶರವಣ, “ಯುನೈಟೆಡ್ ಆಸ್ಪತ್ರೆ’ಯ ಮುಖ್ಯಸ್ಥ ಶಾಂತಕುಮಾರ್, ನಟ ಉಪೇಂದ್ರ ಅವರ ಸಹೋದರ ಸುಧೀಂದ್ರ, ಪಿಆರ್‌ಓ ಅನಂತು, ರೈತರ ಮಕ್ಕಳು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು “ರೈತ’ ಗೀತೆಯನ್ನು ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾತನಾಡಿದ ಅಲೋಕ್, “ಈಗಿನ ದಿನಗಳಲ್ಲಿ ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ? ಅಂತ ಮಕ್ಕಳನ್ನು ಕೇಳಿದರೆ, ಅವರು ಡಾಕ್ಟರ್, ಇಂಜಿನಿಯರ್ ಆಗ್ತಿàನಿ ಎನ್ನುತ್ತಾರೆ ಹೊರತು ರೈತ ಆಗ್ತೀನಿ ಅಂಥ ಯಾರೂ ಹೇಳುವುದಿಲ್ಲ. ನಾನು ರೈತ ಆಗ್ತಿàನಿ ಎನ್ನುವ ದಿನ ಬೇಗ ಬರಬೇಕು ಎಂಬುದೇ ನಮ್ಮ ಆಸೆ. ನಾನು ಹಾಗೂ ಸಂಜಯ್ ಗೌಡ ಇಬ್ಬರು ಬಾಲ್ಯ ಸ್ನೇಹಿತರು. ಹಿಂದೆ “ಕೆ.ಎ 01′ ಎಂಬ ಆಲ್ಬಂ ಸಾಂಗ್ ಮಾಡಿ ವಿದೇಶದಲ್ಲಿ ಬಿಡುಗಡೆ ಮಾಡಿದ್ದೆವು. ಈಗ ರೈತನ ಕುರಿತಾದ ಈ ಗೀತೆ ತಂದಿದ್ದೀವಿ. ಈ ವಿಷಯವನ್ನು ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ಗಣ್ಯರ ಮುಂದೆ ಹೇಳಿದಾಗ ಸಂತೋಷದಿಂದ ಸಾಥ್ ನೀಡಿದರು’ ಎಂದರು ಅಲೋಕ್.
ನಿರ್ಮಾಪಕ ಸಂಜಯ್ ಗೌಡ ಮತ್ತಿತರರು “ರೈತ’ ಗೀತೆಯ ಬಗ್ಗೆ ಮಾತನಾಡಿದರು. “ರೈತ’ ಗೀತೆಗೆ ಆಕಾಶ್ ಜೋಶಿ ಛಾಯಾಗ್ರಹಣವಿದ್ದು, ಗಗನ್ ಬಡೇರಿಯಾ ಮ್ಯೂಸಿಕ್ ಪ್ರೊಗ್ರಾಮಿಂಗ್ ಮಾಡಿದ್ದಾರೆ.