ಕೋವಿಡ್ ಲಾಕ್‌ಡೌನ್‌ನಿಂದಾಗಿ ತೆರೆಗೆಬರಲಾಗದೆ ಅರ್ಧಕ್ಕೆ ನಿಂತಿದ್ದ ಚಿತ್ರಗಳು ಈಗ ನಿಧಾನವಾಗಿ ಮತ್ತೆ ತೆರೆಕಾಣಲು ಸಿದ್ಧತೆಮಾಡಿಕೊಳ್ಳುತ್ತಿವೆ. ಅಕ್ಟೋಬರ್ ಎರಡನೇ ವಾರದಿಂದಸರ್ಕಾರ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಿದ್ದರೂ, ಯಾವುದೇ ಹೊಸಚಿತ್ರಗಳು ಬಿಡುಗಡೆಯಾಗಿರಲಿಲ್ಲ.
ನವೆಂಬರ್ ವೇಳೆಗೆ ಪರಿಸ್ಥಿತಿ ಕೊಂಚ ಮಟ್ಟಿಗೆ ತಿಳಿಯಾಗಿದ್ದು, ನವೆಂಬರ್ ಮೂರನೇ ವಾರದ ಬಳಿಕ “ಆಕ್ಟ್-1978′ ಚಿತ್ರ ತೆರೆಕಾಣುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸಚಿತ್ರಗಳ ಬಿಡುಗಡೆಯಪರ್ವ ಮತ್ತೆ ಶುರುವಾಗಿದೆ. “ಆಕ್ಟ್-1978′ ಬಳಿಕ ನವೆಂಬರ್‌ಕೊನೆಗೆ “ಅರಿಷಡ್ವರ್ಗ’, “ಗಡಿಯಾರ’,”ಮುಖವಾಡ ಇಲ್ಲದವನು84′ ಚಿತ್ರಗಳು ತೆರೆಕಂಡಿವೆ. ಸದ್ಯ ಬಿಡುಗಡೆಯಾದ ಬಹುತೇಕ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ನಿಧಾನವಾಗಿ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಕಡೆಗೆ ಮುಖ ಮಾಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆಕಾಣುತ್ತಿದೆ. ಇನ್ನು ಈ ವಾರ “ರನ್-2′ ಮತ್ತು “ಪುಷ್ಪಕ್’ ಎಂಬ ಎರಡು ಚಿತ್ರಗಳು ತೆರೆಕಾಣುತ್ತಿವೆ. ಅದರಲ್ಲಿ “ರನ್-2′ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ತೆರೆಕಂಡರೆ, ಮತ್ತೂಂದು ಚಿತ್ರ “ಪುಷ್ಪಕ್’ ಓಟಿಟಿಯಲ್ಲಿ ತೆರೆ ಕಾಣುತ್ತಿದೆ.
ಇವೆಲ್ಲದರ ನಡುವೆಯೇ ಆಗಸ್ಟ್ ತಿಂಗಳಿನಿಂದ ಸಿನಿಮಾಗಳ ಶೂಟಿಂಗ್,ಡಬ್ಬಿಂಗ್ ಮತ್ತಿತರ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ಕೊಟ್ಟಿದ್ದರಿಂದ, ಪೋಸ್ಟ್ ಪ್ರೊಡಕ್ಷನ್‌ಕೊನೆ ಹಂತದಲ್ಲಿದ್ದ ಬಹುತೇಕ ಸಿನಿಮಾಗಳು ಈ ಮೂರ್‍ನಾಲ್ಕು ತಿಂಗಳಿನಲ್ಲಿ ತಮ್ಮಕೆಲಸಗಳನ್ನು ಪೂರ್ಣಗೊಳಿಸಿ ಫಸ್ಟ್ ಕಾಪಿಯೊಂದಿಗೆ ಸಿದ್ಧವಾಗಿವೆ.ಕೆಲ ಸಿನಿಮಾಗಳು ಈಗಾಗಲೇ ಸೆನ್ಸಾರ್ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದರೆ, ಇನ್ನೂಕೆಲವು ಸಿನಿಮಾಗಳು ಸೆನ್ಸಾರ್ ಮುಂದಿವೆ. ಚಿತ್ರರಂಗದ ಮೂಲಗಳ ಪ್ರಕಾರ, ಕಳೆದ ಮೂರು ತಿಂಗಳಿನಲ್ಲಿ ಸುಮಾರು40ಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್ ಆಗಿದ್ದು, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಸೆನ್ಸಾರ್ ಆಗಿರುವ, ಆದರೆ
ತೆರೆಕಾಣದ ಸಿನಿಮಾಗಳ ಸಂಖ್ಯೆ ತೆಗೆದುಕೊಂಡರೆ, ಶತಕದ ಗಡಿ ದಾಟುತ್ತದೆ. ಸದ್ಯ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಮೊದಲಿನಂತೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿಲ್ಲ. ಅಲ್ಲದೆ ಷರತ್ತು ಬದ್ಧ ಅನುಮತಿ ನೀಡಿರುವುದರಿಂದ ಮೊದಲಿನಂತೆ ಬಾಕ್ಸಾಫೀಸ್‌ನಲ್ಲಿ ಗಳಿಕೆ ನಿರೀಕ್ಷಿಸುವುದೂ ಸಾಧ್ಯವಿಲ್ಲ. ಹೀಗಿರುವಾಗ, ಇರುವ ಇತಿಮಿತಿಯಲ್ಲೇ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿ ಹಾಕಿದ ಬಂಡವಾಳ ವಾಪಾಸ್ ಪಡೆಯುವ ಯೋಚನೆಯಲ್ಲಿದ್ದಾರೆ ನಿರ್ಮಾಪಕರು.
ಆದರೆ ದಿನದಿಂದ ದಿನಕ್ಕೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಬರುತ್ತಿರುವ ಪ್ರೇಕ್ಷಕರ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಕಾಣುತ್ತಿರುವುದರಿಂದ, ಮುಂದಿನ ಎರಡು-ಮೂರು ವಾರಗಳಲ್ಲಿ ಎಲ್ಲವೂ ಸರಿಯಾಗಬಹುದು. ಸರ್ಕಾರ ಥಿಯೇಟರ್ ಮತ್ತುಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರವೇಶಕ್ಕೆ ವಿಧಿಸಿರುವ ಷರತ್ತುಗಳನ್ನು ಇನ್ನಷ್ಟು ಸಡಿಲಗೊಳಿಸಿದರೆ, ಒಂದೆರಡು ಬಿಗ್ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ, ಎಲ್ಲವೂ ಮೊದಲಿನಂತಾಗುತ್ತದೆಅನ್ನೋದು ಸಿನಿಮಾ ಮಂದಿಯ ಅಭಿಪ್ರಾಯ. ಹೀಗಾಗಿ ಮುಂಬರುವ ದಿನಗಳ ಬಗ್ಗೆ ಇಂಥದ್ದೊಂದು ಭರವಸೆ ಇಟ್ಟುಕೊಂಡು, ಈಗಾಗಲೇ ರೆಡಿಯಾಗಿರುವ ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾಗಳ ಬಿಡುಗಡೆಗೆ ನಿಧಾನವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
“ರಾಬರ್ಟ್’, “ಯುವರತ್ನ’, “ಕೋಟಿಗೊಬ್ಬ-3′, “ಸಲಗ’, “ಗಾಳಿಪಟ-2′, “ಬುದ್ಧಿವಂತ-2, “ಭಜರಂಗಿ-2′, “ಮೈಸೂರು ಡೈರೀಸ್’… ಹೀಗೆ ಸಾಕಷ್ಟು ಸಿನಿಮಾಗಳಿ 2020ಕ್ಕೆ ತೆರೆಕಾಣಬೇಕಿತ್ತು. ಈ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೆಕನ್ನಡ ಚಿತ್ರರಂಗದ ವಾರ್ಷಿಕ ವಹಿವಾಟುಕೂಡಾ ಜೋರಿರುತ್ತಿತ್ತು. ಆದರೆ, ಕೋವಿಡ್ ದಿಂದ ಅದು ಈಡೇರಿಲ್ಲ. ಹಾಗಂತ ನಾವು ಕಳೆದು ಹೋದಕ್ಷಣಗಳನ್ನು ನೆನಪಿಸುತ್ತಾ ಕೊರಗುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗೆ ನೋಡಿದರೆ ಸಿನಿಮಾ ಕ್ಷೇತ್ರ ಬೇಗನೇ ಮೊದಲ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿದೆ.
ಮನರಂಜನೆ ಸಮಾಜದ ಒಂದು ಭಾಗ. ಮನರಂಜನೆ ಇಲ್ಲದ ಜನರು ಇರಲಾರರು. ಒಳ್ಳೆಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವ ಪ್ರಯತ್ನವನ್ನು ಮುಂದುವರೆಸಬೇಕು.ಜೊತೆಗೆ ಇಡೀ ಚಿತ್ರರಂಗ ಜೊತೆಯಾಗಿ ಸಾಗುವ ಅನಿವಾರ್ಯತೆಕೂಡಾ ಇದೆ. ಒಂದು ಸಿನಿಮಾವನ್ನು ಗೆಲ್ಲಿಸುವಲ್ಲಿ ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ.
– ಜಿ.ಎಸ್.ಕಾರ್ತಿಕ ಸುಧನ್