ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗಿಂತ ಹೊರತಾಗಿ, ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಆದಷ್ಟು ಹೊಸಥರದ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಇಲ್ಲೊಂದು ಬಹುತೇಕ ಹೊಸ ಪ್ರತಿಭೆಗಳ ತಂಡ, ಅಂಥದ್ದೇ ಒಂದು ಹೊಸ ಪ್ರಯತ್ನವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಾವೆಲ್ರೂ ಹಾಫ್ ಬಾಯಿಲ್ಡ್’
ನಿರ್ದೇಶಕನಾಗಬೇಕು ಎಂಬ ಕನಸು ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟ, ಬಳಿಕ ಕೆಲಕಾಲ ಸಂಕಲನಕಾರನಾಗಿ ರಿಯಾಲಿಟಿ ಶೋ, ಸೀರಿಯಲ್‌ಗಳು, ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಸುನೀಲ್ ಕುಮಾರ್ ಈ ಚಿತ್ರದ ಮೂಲಕ ನಾಯಕರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಮಾತನಾಡುವ ಸುನೀಲ್ ಕುಮಾರ್, “ಶಾಲಾ ದಿನಗಳಲ್ಲಿಯೇ ನಟನೆಯತ್ತ ಒಲವು ಬೆಳೆಯಿತು. ಒಂದಷ್ಟು ರಂಗ ಚಟುವಟಿಕೆಗಳಲ್ಲೂ ಸಕ್ರಿಯನಾಗಿದ್ದೆ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಯುತ್ತಿದ್ದಂತೆ, ನಿರ್ದೇಶಕನಾಗಬೇಕು ಎಂಬ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಎಡಿಟಿಂಗ್ ಕಲಿತರೆ, ನಿರ್ದೇಶನಕ್ಕೆ ಸಹಾಯವಾಗುತ್ತದೆ ಎಂದು ಕೆಲವರು ಸಲಹೆ ಕೊಟ್ಟಿದ್ದರಿಂದ, ಎಡಿಟಿಂಗ್ ಕೆಲಸ ಶುರು ಮಾಡಿದೆ. ಅಲ್ಲಿಂದ ಸಿನಿಮಾದವರ ಜೊತೆಗಿನ ಒಡನಾಟ ನಿಧಾನವಾಗಿ ಹೆಚ್ಚಾಯಿತು. ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಸೇರಿ ಸಿನಿಮಾ ಮಾಡುವ ಯೋಚನೆ ಮಾಡಿದೆವು. ಆಗ ಶುರುವಾಗಿದ್ದೆ “ನಾವೆಲ್ರೂ ಹಾಫ್ ಬಾಯಿಲ್ಡ್’ ಚಿತ್ರ. ಆರಂಭದಲ್ಲಿ ಯಾವುದಾದ್ರೂ ಹೊಸ ಹೀರೋಗಳನ್ನ ಇಟ್ಟುಕೊಂಡು ಈ ಸಿನಿಮಾ ಶುರು ಮಾಡೋಣ ಅಂಥ ಯೋಚಿಸಿದ್ದೆವು. ಆದರೆ, ಪಾತ್ರಕ್ಕೆ ತಕ್ಕಂತೆ ಹೊಸಬರು ಸಿಗದಿದ್ದರಿಂದ ಕೊನೆಗೆ ಆ ಪಾತ್ರವನ್ನು ನಾನೇ ಮಾಡಿದೆ. ಹಾಗಂಥ ಹೀರೋ ಅಂದಕೂಡಲೆ ಸಿಕ್ಸ್ ಪ್ಯಾಕ್ಸ್ ಇರುವ, ಚಾಕೋಲೆಟ್ ಬಾಯ್ ಥರ ಇರುವ ಪಾತ್ರ ಇದಲ್ಲ. ನಮ್ಮ ಸುತ್ತಮುತ್ತ ಇರುವ ಮಾಮೂಲಿ ಹುಡುಗರ ಥರದ ಪಾತ್ರ. ನಾಲ್ವರು ಹುಡುಗರ ಸುತ್ತ ಚಿತ್ರ ಸಾಗುತ್ತದೆ’ ಎನ್ನುತ್ತಾರೆ.
ಸದ್ಯಕ್ಕೆ ಚಿತ್ರ ಸೆನ್ಸಾರ್ ಮುಂದಿದೆ. ಇದೇ ವೇಳೆ ನಿಧಾನವಾಗಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಶುಕ್ರವಾರ (ಇಂದು) ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದೆ. ಚಿತ್ರದಲ್ಲಿ ದೀಪಕ್, ಹಂಪೇಶ್, ಮಂಜುನಾಥ್, ಮಾತಂಗಿ ಪ್ರಸನ್, ವಿನ್ಯಾ ಶೆಟ್ಟಿ, ತಬಲನಾಣಿ, ದೇವದಾಸ್ ಕಾಪಿಕಾಡ್ ಇತರರು ಇದ್ದಾರೆ. “ಡಿಕೆಎಸ್ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಶಿವರಾಜ್ ಬಿ, ವೆಂಕಟಾಚ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ತಬಲನಾಣಿ ಸಂಭಾಷಣೆಯಿದೆ. ಜನವರಿ ಅಂತ್ಯದಲ್ಲಿ ನೋಡುಗರು “ಹಾಫ್ ಬಾಯಿಲ್ಡ್’ ಟೇಸ್ಟ್ ಸವಿಯಬಹುದು.