Advertisement

ಎಲ್ಲೆಡೆ ಎಳ್ಳ ಅಮಾವಾಸ್ಯೆ ಸಂಭ್ರಮ

01:42 PM Jan 14, 2021 | Team Udayavani |

ಕಲಬುರಗಿ: ರೈತರ ಹಬ್ಬ ಎಳ್ಳೆ ಅಮಾವಾಸ್ಯೆಯನ್ನು ಬುಧವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗಿದ್ದು, ರೈತರು ಚೆರಗ ಭೂತಾಯಿಗೆ ನೈವೇದ್ಯ ಅರ್ಪಿಸಿ ಸಂಭ್ರಮಿಸಿದರು. ಇನ್ನು ಮಹಾನಗರದ ವಾಸಿಗಳು ಸಾರ್ವಜನಿಕ ಉದ್ಯಾನವನಗಳಿಗೆ ತೆರಳಿ ಎಳ್ಳಾಮಾಸ್ಯೆ ಊಟ ಮಾಡಿ ಸಂತಸಪಟ್ಟರು.

Advertisement

ಹಿಂಗಾರಿನ ಪ್ರಮುಖ ಬೆಳೆ ಜೋಳದ ಹೊಲದಲ್ಲಿ ಚರಗಾ ಹೊಡೆಯುವ ಹಾಗೂ ಪಾಂಡವರ ಪೂಜೆ ನೆರವೇರಿಸುವ ಎಳ್ಳ ಅಮಾವಾಸ್ಯೆ ರೈತರ ಪಾಲಿನ ಪ್ರಮುಖ ಹಬ್ಬ. ಸಮೃದ್ಧ ಬೆಳೆಯಿಂದ ಮೈದುಂಬಿ ನಿಂತ ಭೂತಾಯಿಗೆ ಸೀಮಂತದ ರೀತಿಯಲ್ಲಿ ರೈತರು ಬಯಕೆಯ ಬುತ್ತಿ ಮಾಡಿ ಚರಗ ಅರ್ಪಿಸುತ್ತಾರೆ. ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ತೊಗರಿ ಬೆಳೆ ಹಾನಿಯಾಗಿದ್ದರೂ ಸ್ವಲ್ಪ ಪರ್ವಾಗಿಲ್ಲ ಎನ್ನುವಂತೆ ಜೋಳ ಬೆಳೆ ಕಂಡು ಬಂತು.

ಜಿಲ್ಲಾದ್ಯಂತ ಜೋಳ, ಕಡಲೆ, ಕುಸುಬೆ ಮತ್ತಿತರ ಬೆಳೆಗಳನ್ನು ಬೆಳೆಯಲಾಗಿದೆ. ಬೆಳೆದಷ್ಟು ಬೆಳೆಯಾದರೂ ಸಮೃದ್ಧಿ ಆಗಲಿ ಎಂದು ಭೂತಾಯಿಗೆ ಎಳ್ಳ ಅಮಾವಾಸ್ಯೆ ಪ್ರಯುಕ್ತ ರೈತರು ಪ್ರಾರ್ಥಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆಯೇ ಜನರು ಹೊಲಗಳಿಗೆ ತೆರಳಿ ಬೆಳೆಯ ಸಾಲಿನ ಮಧ್ಯೆ ಪಾಂಡವರನ್ನು ಪ್ರತಿಷ್ಠಾಪಿಸಿ (ಐದು ಕಲ್ಲುಗಳನ್ನು ಇಟ್ಟು ಪೂಜೆ ಮಾಡುವುದು) ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿಯ ಎಡೆ ಇಟ್ಟು ಪೂಜಿಸಿದರು. ಚರಗ ಪದ ಸಹ ಹಾಡಲಾಯಿತು.

ಇದನ್ನೂ ಓದಿ: ಕಲಬುರಗಿಗೆ 29,500 ಡೋಸ್ ಕೋವಿಶೀಲ್ಡ್ ಲಸಿಕೆ ಆಗಮನ: ನಾಲ್ಕು ಜಿಲ್ಲೆಗಳಿಗೆ ಹಂಚಿಕೆ

ಉದ್ಯಾನವನದಲ್ಲಿ ಜನಜಂಗುಳಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ, ವಿಶಿಷ್ಟ ಭೋಜನ ಸವಿದರು. ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ತಮ್ಮ-ತಮ್ಮ ಕುಟುಂಬದವರು, ಬಂಧು-ಬಳಗದವರು ಉದ್ಯಾನವನದಲ್ಲಿ ಸೇರಿದ್ದರು. ಇದರಿಂದ ಇಡೀ ಉದ್ಯಾನವನ ಜನಜಂಗುಳಿಯಿಂದ ಕೂಡಿತ್ತು. ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಜೋಳದ ಕಡಬು, ಹೋಳಿಗೆ, ಭಜ್ಜಿ ಪಲ್ಯ, ಖಡಕ್‌ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಣ್ಣೆಗಾಯಿ, ಚಿತ್ರಾನ್ನ, ಹಪ್ಪಳ, ಪುಂಡಿಪಲ್ಯ, ಶಾವಿಗೆ ಪಾಯಸ ಮುಂತಾದ ಭಕ್ಷ್ಯ ಭೋಜನ ಸವಿಯುವ ಮೂಲಕ ಎಳ್ಳ ಅಮಾವಾಸ್ಯೆ ಆಚರಿಸಿದರು.

Advertisement

ಮಕ್ಕಳಿಗೆ ಆಟದ ಸಂಭ್ರಮ: ಎಳ್ಳ ಅಮಾವಾಸ್ಯೆಯ ಬಗೆ-ಬಗೆಯ ಊಟದ ನಂತರ ಮಕ್ಕಳು, ಯುವಕರು ವಿವಿಧ ಆಟೋಟಗಳನ್ನಾಡಿ ಸಂಭ್ರಮಿಸಿದರು. ಜೋಕಾಲಿ, ಜಾರು ಬಂಡೆ, ಶೆಟ್ಟಲ್‌ ಕಾಕ್‌, ಓಟ, ಕಬಡ್ಡಿ ಸೇರಿದಂತೆ ಅನೇಕ ಆಟಗಳನ್ನು ಕುಣಿದು ಕುಪ್ಪಳಿಸಿದರು. ಮಕ್ಕಳಿಗೆ ಪೋಷಕರು ಸಹ ಸಾಥ್‌ ಕೊಟ್ಟು ತಾವೂ ಜೋಕಾಲಿ ಮತ್ತಿತರ ಆಟಗಳನ್ನಾಡಿ ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next