ಚಾಮರಾಜನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಜಯಗಳಿ ಸಿದ್ದು, ಚಾಮರಾಜನಗರ ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆಯಿದ್ದು, ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೂ ಮಂತ್ರಿಯಾಗುವ ಅವಕಾಶ ಸಿಗಲಿದೆಯೇ? ಎಂಬ ಕುತೂಹಲ ಮೂಡಿದೆ.
4ನೇ ಬಾರಿ ಗೆಲುವು: ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ 4ನೇ ಬಾರಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕ್ಷೇತ್ರದಲ್ಲಿ ಈ ಮೊದಲು ಯಾವ ಶಾಸಕರೂ ಹ್ಯಾಟ್ರಿಕ್ ಸಾಧನೆ ಮಾಡಿರಲಿಲ್ಲ. 2018ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಶೆಟ್ಟರು ಹ್ಯಾಟ್ರಿಕ್ ಹೀರೋ ಆಗಿದ್ದರು. ಈಗ ಆ ದಾಖಲೆಯನ್ನು ಇನ್ನೂ ಉತ್ತಮಪಡಿಸಿಕೊಂಡು ಸತತ ನಾಲ್ಕನೇ ಬಾರಿ ಗೆದ್ದಿದ್ದಾರೆ. ಅಲ್ಲದೇ, ಅವರು ಬಿಜೆಪಿ ಸರ್ಕಾರದ ಪ್ರಬಲ ಮಂತ್ರಿ, ಪ್ರಭಾವಿ ನಾಯಕ ವಿ.ಸೋಮಣ್ಣ ಅವರನ್ನು ಮಣಿಸಿ ಜಯಗಳಿಸಿರುವುದು ವಿಶೇಷ. ಪುಟ್ಟರಂಗಶೆಟ್ಟಿಯವರು ರಾಜ್ಯದಲ್ಲಿ ಹಿಂದುಳಿದ ಉಪ್ಪಾರ ಸಮಾಜವನ್ನು ಪ್ರತಿನಿಧಿಸುತ್ತಿರುವ ಏಕೈಕ ಶಾಸಕ. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ನಿಶ್ಚಳವಾಗಿದೆ.
ಆರ್.ನರೇಂದ್ರ ಸೋಲು: ಹನೂರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆರ್.ನರೇಂದ್ರ ಅವರು ಆಯ್ಕೆಯಾಗದಿರುವುದು ಪುಟ್ಟರಂಗಶೆಟ್ಟಿ ಹಾದಿಯನ್ನು ಮತ್ತಷ್ಟು ಸುಗಮ ಮಾಡಿದೆ. ಈ ಬಾರಿ ನರೇಂದ್ರ ಗೆದ್ದಿದ್ದರೆ ಶೆಟ್ಟರಂತೆಯೇ ಸತತ 4ನೇ ಗೆಲುವು ಸಾಧಿಸುತ್ತಿದ್ದರು. ಕಳೆದ ಬಾರಿ ಶೆಟ್ಟರನ್ನು ಮಂತ್ರಿ ಮಾಡಿದ್ದರಿಂದ ಈ ಬಾರಿ ನರೇಂದ್ರ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇತ್ತು. ಆದರೆ, ನರೇಂದ್ರ ಅವರ ಸೋಲಿನಿಂದ ಆ ಸಾಧ್ಯತೆ ಇಲ್ಲವಾಗಿದೆ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಶೆಟ್ಟರು ಪ್ರಥಮ ಬಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದರು. ಈಗ ಮತ್ತೆ ಸಚಿವರಾಗುವ ಅವಕಾಶ ತಾನಾಗೇ ಒಲಿದುಬಂದಿದೆ. ಈ ಬಾರಿ ಅವರು ಸಚಿವರಾದರೆ ಯಾವ ಖಾತೆ ದೊರಕಬಹುದು ಎಂಬ ಕುತೂಹಲ ಅವರ ಬೆಂಬಲಿಗರಲ್ಲಿದೆ. ಕುತೂಹಲ:
ಎ.ಆರ್.ಕೃಷ್ಣಮೂರ್ತಿ ಅವರಿಗೆ ದೊರಕುವುದೇ ಸಚಿವ ಸ್ಥಾನ?: ಇನ್ನು, ಕೊಳ್ಳೇ ಗಾಲದಿಂದ 59 ಸಾವಿರ ಮತಗಳ ಅಂತರದಿಂದ ಜಯಗಳಿಸುವ ಮೂಲಕ ರಾಜ್ಯದಲ್ಲೇ 2ನೇ ಅತಿ ಹೆಚ್ಚಿನ ಲೀಡ್‌ನಿಂದ ಗೆದ್ದಿರುವ ಎ.ಆರ್.ಕೃಷ್ಣ ಮೂರ್ತಿ ಅವರಿಗೆ ಸಚಿವ ಸ್ಥಾನ ದೊರಕವುದೇ? ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ರಾಜಕೀಯ ಪುನರ್ಜನ್ಮ: ಎಆರ್‌ಕೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಪುತ್ರ. ಜಿಲ್ಲೆಯ ರಾಜಕೀಯ ವಲಯದಲ್ಲಿ ತಮ್ಮದೇ ಸ್ಥಾನ ಹೊಂದಿದ್ದಾರೆ. 1989ರಲ್ಲೇ ಸಂತೆಮರಹಳ್ಳಿ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ, ಬಳಿಕ 1994 ಹಾಗೂ 1999ರಲ್ಲಿ ಶಾಸಕರಾಗಿದ್ದವರು. 2004ರ ಚುನಾವಣೆಯಲ್ಲಿ 1 ಮತದಿಂದ ಸೋತು, ಅದಾದ ಬಳಿಕ ಶಾಸಕ ಹಾಗೂ ಸಂಸದ ಚುನಾವಣೆಗಳಲ್ಲಿ ಸತತವಾಗಿ ಸೋಲಿನ ಕಹಿ ಉಂಡವರು. 19 ವರ್ಷಗಳ ರಾಜಕೀಯ ವನವಾಸದ ಬಳಿಕ ಈಗ ರಾಜಕೀಯ ಪುನರ್ಜನ್ಮ ಪಡೆದವರು.
ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ: ಸಿದ್ದರಾಮಯ್ಯನವರ ಆಪ್ತ ವಲಯದ ಕೃಷ್ಣಮೂರ್ತಿ ಅವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕುವುದೇ ಎಂಬ ಕುತೂಹಲ ಮೂಡಿದೆ. ನೆರೆಯ ಮೈಸೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ದೊರಕುವುದರಿಂದ, ಜಿಲ್ಲೆಯಲ್ಲಿ ಇನ್ನೊಬ್ಬ ದಲಿತ ಶಾಸಕರಿಗೆ ಸಚಿವ ಸ್ಥಾನ ದೊರಕುವುದೇ ಎಂಬ ಪ್ರಶ್ನೆ ಮೂಡಿದೆ. ಆದರೆ ಎಆರ್‌ಕೆ ಹಿರಿತನ ಪರಿಗಣಿಸಿ, ಅವರ ರಾಜಕೀಯ ವನವಾಸದ ಕಹಿ ಮರೆಸಿ ಸಿಹಿ ಉಣಿಸಲು ಸಚಿವ ಸ್ಥಾನ ನೀಡಬಹುದು ಎಂಬ ನಿರೀಕ್ಷೆಯೂ ಅಭಿಮಾನಿಗಳಲ್ಲಿ ಹೆಚ್ಚಿದೆ.
-ಕೆ.ಎಸ್.ಬನಶಂಕರ ಆರಾಧ್ಯ