ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ನೂತನ ಸಚಿವರಾಗಿ ಮೊದಲ ಹಂತದಲ್ಲಿ 17 ಮಂದಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮತ್ತೊಂದೆಡೆ ಬಿಎಸ್ ಯಡಿಯೂರಪ್ಪನವರ ಆಪ್ತರು ಎಂದೇ ಗುರುತಿಸಿಕೊಂಡಿರುವ ಹೊನ್ನಾಳಿ ರೇಣುಕಾಚಾರ್ಯ, ರಾಮದಾಸ್, ಉಮೇಶ್ ಕತ್ತಿ, ಸಿಪಿ ಯೋಗೇಶ್ವರ್ ಸೇರಿದಂತೆ ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದೆ.
ನೂತನ ಸಚಿವರ ಪಟ್ಟಿಯಲ್ಲಿ ಈ ಬಾರಿ ಬಿಎಸ್ ಆಪ್ತರಾದ ವಿ.ಸೋಮಣ್ಣ ಮತ್ತು ಗೋವಿಂದ ಕಾರಜೋಳ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮುರುಗೇಶ್ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ಜಿಎಚ್ ತಿಪ್ಪಾರೆಡ್ಡಿ ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ, ಹಾಲಾಡಿ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
ಸಚಿವ ಸಂಪುಟ ರಚನೆ ಬೆನ್ನಲ್ಲೇ ಅಸಮಾಧಾನದ ಹೊಗೆ:
ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಬಿಜೆಪಿಯ ಗೂಳಿಹಟ್ಟಿ ಶೇಖರ್, ಜಿಎಚ್ ತಿಪ್ಪಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಬಿಜೆಪಿಗೆ ಸೇರಿ ತಪ್ಪು ಮಾಡಿದೆ. ನನಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯನ್ನು ಜಿಲ್ಲೆಯ ಜನರು ಇಟ್ಟಿದ್ದರು. ಆದರೆ ಅದು ಹುಸಿಯಾಗಿದೆ ಎಂದು ಗೂಳಿಹಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರ ಮನಸ್ಸಿನಲ್ಲಿ ಏನಿದೆಯೋ, ನಾನು ಸಚಿವ ಸ್ಥಾನದ ಬಗ್ಗೆ ಆಸೆಯೇ ಇಟ್ಟುಕೊಂಡಿಲ್ಲ. ನಾನು ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಆಕ್ರೋಶ, ಅಂಗಾರ, ಹಾಲಾಡಿ ಅಸಮಧಾನ;
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದ್ದಕ್ಕೆ ಬಿಜೆಪಿ ಕಾರ್ಯಕರ್ತರು ಟಯರ್ ಗೆ ಬೆಂಕಿ ಹಚ್ಚಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು ಕೂಡಾ ನನ್ನ ಕ್ಷೇತ್ರದ ಜನರ ನಿರೀಕ್ಷೆ, ಅಪೇಕ್ಷೆ ಸುಳ್ಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಅಪ್ಪಚ್ಚು ರಂಜನ್, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಜಿಲ್ಲೆಗೆ ಒಂದೇ ಸಚಿವ ಸ್ಥಾನ:
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಕರಾವಳಿಗೆ ಕೇವಲ ಒಂದೇ ಸಚಿವ ಸ್ಥಾನ ಸಿಕ್ಕಿದೆ. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್, ಸುಳ್ಯದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಹಾಗೂ ಉತ್ತರಕನ್ನಡದ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಜಿಲ್ಲೆಗಳಲ್ಲಿ ಎಂಟು ಬಿಜೆಪಿ ಶಾಸಕರಿದ್ದರು ಕೂಡಾ ಯಾರಿಗೂ ಸಚಿವ ಸ್ಥಾನ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ತಿಪ್ಪಾರೆಡ್ಡಿ ಬೆಂಬಲಿಗರ ಆಕ್ರೋಶ
ಮಂತ್ರಿಗಿರಿ ಕೈ ತಪ್ಪಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಶಾಸಕ ತಿಪ್ಪಾರೆಡ್ಡಿ ಬೆಂಬಲಿಗರ ಪ್ರತಿಭಟನೆ ನಡೆಯಿತು. ನಗರದ ಗಾಂಧಿ ವೃತ್ತದಲ್ಲಿ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹೊರಗಿನವರಿಗೆ ಮಂತ್ರಿಗಿರಿ ಕೊಟ್ಟು ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಲಾಗಿದೆ. ಶಾಸಕ ತಿಪ್ಪಾರೆಡ್ಡಿ ಹಿರಿತನ ಕಡೆಗಣಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದರು.