ಚನ್ನಪಟ್ಟಣ: ಅತ್ತ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರು-ಊರುಗಳಿಗೆ ಎಡತಾಕಿ ಗ್ರಾಮಗಳಲ್ಲಿ ಹಿರಿಯ- ಕಿರಿಯ ನಾಯಕರನ್ನು ತಮ್ಮತ್ತ ಸೆಳೆಯುತ್ತಿದ್ದರೆ, ಇತ್ತ ತಾಲೂಕು ಜೆಡಿಎಸ್ ಕೂಡ ಸದ್ದಿಲ್ಲದೆ ಆಪರೇಷನ್ ಜೆಡಿಎಸ್‌ಗೆ ಕೈ ಹಾಕಿದೆ.
ಮಾಜಿ ಶಾಸಕ ಎಂ.ಸಿ.ಅಶ್ವಥ್ ಮತ್ತು ಅವರ ಸಹೋದರ ಎಂ.ಸಿ. ಕರಿಯಪ್ಪ ನೇತೃತ್ವದಲ್ಲಿ ಪಕ್ಷ ಸಂಘಟನೆ, ಕಾರ್ಯಾಚರಣೆ ಆರಂಭವಾಗಿದ್ದು, ತಾಲೂಕಿನ ಕೂಡೂರು ಗ್ರಾಮದ 30ಕ್ಕೂ ಹೆಚ್ಚು ಯುವಕರು ಮುಖಂಡರು, ಕಾರ್ಯಕರ್ತರು ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದ ಅಭಿವೃದ್ಧಿ ಮೆಚ್ಚಿ ಎಂ.ಸಿ.ಕರಿಯಪ್ಪ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ನಿವೇಶನ ಹಂಚಿಕೆಯಲ್ಲಿ ರಾಜಕೀಯ: ಎಂ.ಸಿ.ಅಶ್ವಥ್ ಅವರ ನಿವಾಸದಲ್ಲಿ ಸೇರ್ಪಡೆಯಾದ ಯುವ ಮುಖಂಡರು ಮಾತನಾಡಿ, ಕೂಡ್ಲೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಸಿ.ಪಿ.ಯೋಗೇಶ್ವರ್ 10 ವರ್ಷದಿಂದ ಬರೀ ರಾಜಕೀಯ ಮಾಡಿದ್ದರು. ಆದರೆ, ಕುಮಾರ ಸ್ವಾಮಿ ಆಯ್ಕೆಯಾದ ಒಂದೂವರೆ ವರ್ಷದಲ್ಲಿ ನಮ್ಮ ಗ್ರಾಮದ ನಿವೇಶನ ಹಂಚಿಕೆ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ ಶೀಘ್ರವೇ ವಸತಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿ, ಒಂದು ಮಾದರಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಆದು ನೆರವೇರಲು ಮತ್ತೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಎಂಸಿಕೆ ಸಹೋದರರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಲು ಜೆಡಿಎಸ್ ಸೇರಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಯುವ ಶಕ್ತಿ ಪ್ರದರ್ಶನ: ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿರುವ ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖೀಲ್ ಜೊತೆ ಕೆಲಸ ಮಾಡುವ ನಿಟ್ಟಿನಲ್ಲಿ ಪಕ್ಷದ ಯುವ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಎಂ.ಸಿ.ಕರಿಯಪ್ಪ ಮಾತನಾಡಿ, ಕೂಡ್ಲೂರು ಗ್ರಾಮ ಯುವ ಮುಖಂಡರು ಕುಮಾರಸ್ವಾಮಿ ಅಭಿವೃದ್ಧಿ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ನೂರಾರು ಮಂದಿ ಜೆಡಿಎಸ್‌ಗೆ ಸೇರುತ್ತಾರೆ. ಗ್ರಾಮದ ಸಭೆ ಮಾಡಿ, ಎಲ್ಲರನ್ನೂ ನಿಖೀಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ. ಗ್ರಾಮದಲ್ಲಿನ ಯಾವುದೇ ಕೆಲಸವಾಗಲಿ, ಸಮಸ್ಯೆಯಾಗಲಿ ನಿಮ್ಮ ಜೊತೆ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಮುಖಂಡ ಎಂಜಿಕೆ ಪ್ರಕಾಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮೋಳೆದೊಡ್ಡಿ ಬಿಳಿಯಪ್ಪ, ಅರವಿಂದ್, ಕಸಬಾ ಪಿಎಸಿಎಸ್ ಅಧ್ಯಕ್ಷ ಆತ್ಮಾರಾಮ್, ಸೂರಪ್ಪಗೌಡ ಹಾಗೂ ಪ್ರಮುಖರು ಉಪಸ್ಥಿತರಿದ್ದರು.