ಹುಬ್ಬಳ್ಳಿ: ಸರಿಸುಮಾರು 45 ವರ್ಷಗಳ ಹಿಂದೆ ಬಂಡಿವಾಡ ಅಗಸಿಯ ಸುಮಾರು 34 ಗುಂಟೆ ಹೊಂಡ ರೂಪದ ಜಾಗ ಕೇವಲ 73 ಸಾವಿರ ರೂ. ವೆಚ್ಚದಲ್ಲಿ ಸಾರ್ವಜನಿಕ ಬಳಕೆಯ ಮಹತ್ವದ ಜಾಗದ ರೂಪ ಪಡೆದಿತ್ತು. ಇಂದು ಅದೇ ಜಾಗದ ಪ್ರತಿ ಚದರ ಅಡಿ ಲಕ್ಷಾಂತರ ರೂ. ಬೆಲೆ ಹೊತ್ತು ನಿಂತಿದೆ.
ಇದೇ ಜಾಗದಲ್ಲಿ ಇದೀಗ ಅಂದಾಜು 17 ಕೋಟಿ ರೂ. ವೆಚ್ಚದಲ್ಲಿ ಬಹುಪಯೋಗಿ ಐದಂತಸ್ತಿನ ಕಟ್ಟಡವೊಂದು ಕಂಗೊಳಿಸುತ್ತಿದ್ದು, ಕೆಲವೇ ತಿಂಗಳಲ್ಲಿ ಇದು ಸಾರ್ವಜನಿಕ ಬಳಕೆಗೆ ಅರ್ಪಣೆಯಾಗಲಿದೆ. ನಾವು ಹೇಳಲು ಹೊರಟಿರುವುದು ವಾಣಿಜ್ಯ ನಗರಿ ಹುಬ್ಬಳ್ಳಿಯಪ್ರತಿ ಪ್ರದೇಶಕ್ಕೂ ಹಾಗೂ ಹುಬ್ಬಳ್ಳಿ-ಧಾರವಾಡ ಮಧ್ಯ ಸಾರಿಗೆ ಸಂಪರ್ಕಕ್ಕೆ ಮಹತ್ವದ ಕೊಂಡಿಯಾದ ಸಿಬಿಟಿಯ ಕಥೆ.
ಆರಂಭದಲ್ಲಿ ದುರ್ಗದ ಬಯಲು ವೃತ್ತದಿಂದ ನಿರ್ವಹಣೆಗೊಳ್ಳುತ್ತಿದ್ದ ನಗರ ಬಸ್ ಸಾರಿಗೆ ಸಂಚಾರ ವ್ಯವಸ್ಥೆ(ಸಿಬಿಟಿ) 1971ರಿಂದ ದುರ್ಗದ ಬಯಲು ಸಮೀಪದ ಬಂಡಿವಾಡ ಅಗಸಿ ಜಾಗಕ್ಕೆ ಸ್ಥಳಾಂತರಗೊಂಡು ಅಂದಿನ ದಿನಮಾನಕ್ಕೆ ತಕ್ಕಂತೆ ಬಸ್ ನಿಲ್ದಾಣ ರೂಪ ಪಡೆದಿತ್ತು.
2013ಕ್ಕಿಂತಲೂ ಮೊದಲು ಸಿಬಿಟಿ ನೋಡಿದವರಿಗೆ ಇದೀಗ ಬದಲಾದ ಸಿಬಿಟಿ ಖಂಡಿತವಾಗಿಯೂ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಿಬಿಟಿ ಹೊಸ ರೂಪ ಪಡೆದುಕೊಂಡಿದೆ. ಹುಬ್ಬಳ್ಳಿಯ ವಿವಿಧ ಬಡಾವಣೆ, ಹುಬ್ಬಳ್ಳಿ-ಧಾರವಾಡ ಮಧ್ಯ ಸಂಪರ್ಕ ಕಲ್ಪಿಸಲು ನಿತ್ಯ 131ಕ್ಕೂ ಅಧಿಕ ಬಸ್‌ಗಳು, 1015ಕ್ಕೂ ಅಧಿಕ ಮಾರ್ಗಗಳ ಸಂಚಾರಕ್ಕೆ ಸಿಬಿಟಿಯೇ ಆಸರೆಯಾಗಿದೆ.
ಬಂಡಿವಾಡ ಅಗಸಿ ಜಾಗ ಸಿಬಿಟಿ ರೂಪ ಪಡೆಯುತ್ತಿದಂತೆಯೇ ಜಾಗದ ಸುತ್ತಮುತ್ತಲ ಪ್ರದೇಶದ ಜಾಗಗಳಿಗೆ ಚಿನ್ನದ ಬೆಲೆ ಬರತೊಡಗಿತು. ಅಷ್ಟೇ ಅಲ್ಲ ಸಿಬಿಟಿ ಸುತ್ತಮುತ್ತಲು ನೂರಾರು ಕುಟುಂಬಗಳು ವಿವಿಧ ಉದ್ಯೋಗ ಕಂಡುಕೊಂಡಿವೆ. ಅನೇಕ ಕುಟುಂಬಗಳು ಇದೇ ಬಸ್ ನಿಲ್ದಾಣವನ್ನೇ ನಂಬಿ ಬದುಕುತ್ತಿವೆ. ಆಧುನಿಕ ಕಟ್ಟಡ ರೂಪ ಪಡೆದಿರುವ ಸಿಬಿಟಿ ಲೋಕಾರ್ಪಣೆಗೊಂಡರೆ ಈ ಹಿಂದಿಗಿಂತಲೂ ಹೆಚ್ಚಿನ ಜನರಿಗೆ ಉದ್ಯೋಗ, ವೃತ್ತಿಗೆ ಅವಕಾಶ ಒದಗಿಸಿಕೊಡಲಿದೆ ಎಂಬುದು ಸ್ಪಷ್ಟ.
ಅಹ್ಮದಾಬಾದ್‌ನಲ್ಲಿ ಸಿದ್ಧವಾಯ್ತು ನೀಲನಕ್ಷೆ: ಈಗ ಸಿಬಿಟಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡದ ನೀಲನಕ್ಷೆಯನ್ನು ಅಹಮದಾಬಾದ್‌ನ ಎಸ್‌ಇಟಿ ವಿಶ್ವವಿದ್ಯಾಲಯದವರು ಸಿದ್ಧಪಡಿಸಿದ್ದಾರೆ. ಬಿಆರ್‌ಟಿಎಸ್ ಯೋಜನೆಯಲ್ಲಿ ಎಸ್‌ಇಟಿ ವಿವಿ ಮಹತ್ವದ ಪಾತ್ರ ವಹಿಸಿದೆ.
* ಶಿವಶಂಕರ ಕಂಠಿ