ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಂಗಳವಾರ ಎರಡು ನೂತನ ಸಾಲ ಯೋಜನೆಗಳನ್ನು ಪ್ರಕಟಿಸಿದೆ. ಈ ಯೋಜನೆಗಳು ಊಟ-ಉಪಾಹಾರ ಪೂರೈಕೆದಾರರಿಗೆ (ಕೇಟರರ್) ಅನುಕೂಲ ಆಗಲಿದ್ದು, ಇದರ ಜೊತೆಗೆ ಉದ್ಯೋಗಸ್ಥ ಅಥವಾ ನಿಶ್ಚಿತ ಆದಾಯ ಹೊಂದಿರುವ ಮಹಿಳೆಯರಿಗೆ ಸಂತಸದ ಸುದ್ದಿ ನೀಡಿದೆ.
ಈ ಮೂಲಕ ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸಲೂ ಅನುವು ಮಾಡಿಕೊಟ್ಟಿದೆ. ಸಾಲ ಯೋಜನೆ ಬಿಡುಗಡೆಗೊಳಿಸಿದ ಬ್ಯಾಂಕ್ ಅಧ್ಯಕ್ಷ ಎಸ್.ರವೀಂದ್ರನ್ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ಉದ್ಯಮ ಕ್ಷೇತ್ರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹೋಟೆಲ್ ಉದ್ಯಮದಲ್ಲಿ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವವರನ್ನು ಗಮನದಲ್ಲಿಟ್ಟುಕೊಂಡು
-ಅವರ ವ್ಯವಹಾರ ವಿಸ್ತರಣೆಗೆ ಗರಿಷ್ಠ 10 ಲಕ್ಷ ರೂ.ವರೆಗೆ ಸಾಲ ನೀಡಲು ವಿಕಾಸ ಅನ್ನಪೂರ್ಣ ಸಾಲ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಈ ಸಾಲ ಯೋಜನೆಯಲ್ಲಿ ಹೋಟೆಲ್, ದಾಬಾ, ಉಪಾಹಾರ ಗೃಹ, ಬೇಕರಿ, ಕ್ಯಾಂಟೀನ್ ಒಳಗೊಂಡು ಸಣ್ಣ ಪ್ರಮಾಣದ ಊಟ-ಉಪಾಹಾರ ಪೂರೈಕೆದಾರರಿಗೆ (ಕೇಟರರ್) ಸುಲಭ ಸಾಲ ಪಡೆಯಲು ಅವಕಾಶವಿದೆ.
ಈ ಸಾಲ ಯೋಜನೆಯಡಿ ಅರ್ಹರಾಗುವವರಿಗೆ ಯಾವುದೇ ಜಾಮೀನು ಅಥವಾ ತೃತೀಯ ಭದ್ರತೆಯ ಅವಶ್ಯಕತೆ ಇಲ್ಲದಿರುವುದು ಈ ಸಾಲ ಯೋಜನೆಯ ವಿಶೇಷತೆಯಾಗಿದೆ. ಬಡ್ಡಿ ದರ ಕೂಡ ಸ್ಪರ್ಧಾತ್ಮಕವಾಗಿದ್ದು 5 ಲಕ್ಷದ ವರೆಗೆ ವರ್ಷಕ್ಕೆ ಶೇ.11.5 ಮತ್ತು 5 ಲಕ್ಷ ಮೇಲ್ಪಟ್ಟು ಶೇ.12 ಮಾತ್ರ ಅನ್ವಯವಾಗುವುದು ಎಂದು ತಿಳಿಸಿದರು.
ವಿಕಾಸ ಮಹಿಳಾ ಸ್ನೇಹಿ: ಉದ್ಯೋಗಸ್ಥ ಅಥವಾ ನಿಶ್ಚಿತ ಆದಾಯ ಹೊಂದಿರುವ ಮಹಿಳೆಯರು ಕಾರು ಅಥವಾ ದ್ವಿ-ಚಕ್ರ ವಾಹನ ಖರೀದಿಸಲು ವಿಕಾಸ ಮಹಿಳಾ ಸ್ನೇಹಿ ಎಂಬ ವಿಶೇಷ ಸಾಲ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಸ್ವತಂತ್ರ ಓಡಾಟದ ಮಹಿಳಾ ವರ್ಗದ ಕನಸನ್ನು ನನಸು ಮಾಡಲಾಗುತ್ತಿದ್ದು,
ಬಡ್ಡಿ ದರದಲ್ಲೂ ಸಾಮಾನ್ಯರಿಗೆ ಅನ್ವಯಿಸುವ ಬಡ್ಡಿಗಿಂತ ಅರ್ಧ ಪ್ರತಿಶತ ರಿಯಾಯತಿ ನೀಡಲಾಗಿದ್ದು, ಅದು ಕೇವಲ 10 ಪ್ರತಿಶತವಾಗಿದೆ. ಸಾಲ ಮರುಪಾವತಿ ಅವಧಿ 5 ವರ್ಷಗಳಾಗಿದ್ದು 60 ಸಮಾನ ಕಂತುಗಳಲ್ಲಿ ಸಾಲ ಮರು ಪಾವತಿಸಬೇಕಾಗುವುದು ಎಂದು ವಿವರಿಸಿದ್ದಾರೆ. ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಪತಿ ಹೆಗಡೆ ಇದ್ದರು.