ಕಲಬುರಗಿ: ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್, ಮೊದಲಿನ ದಾವಣಗೆರೆ ಜಿಲ್ಲೆಯ ಈಗಿನ ಬಳ್ಳಾರಿ ಜಿಲ್ಲೆಯ ಹರಪ್ಪನಳ್ಳಿ ಹಾಗೂ ಧಾರವಾಡದಲ್ಲಿ ಹೊಸದಾಗಿ ಕೆಎಸ್ಆರ್ ಪಿ ತುಕಡಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಕೆಎಸ್ಆರ್ ಪಿ ‘ರನ್ ಫಾರ್ ಫೀಟ್’ ಓಟದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಬಟಾಲಿಯನ್ ಸ್ಥಾಪನೆ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅನುಮೋದನೆ ದೊರೆತು ಘಟಕಗಳು ಪ್ರಾರಂಭಕ್ಕೆ ಚಾಲನೆ ದೊರಕಲಿದೆ ಎಂದರು.
ಇದನ್ನೂ ಓದಿ:ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು: ಸಿ.ಟಿ.ರವಿ
ಕೆಎಸ್ಆರ್ ಪಿ ಸಿಬ್ಬಂದಿ (ಪೇದೆಗಳ)ಗಳಲ್ಲಿ ಆರೋಗ್ಯ ಗುಣಮಟ್ಟತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೊಡ್ಡ ಹೊಟ್ಟೆಯುಳ್ಳವರಿಗೆ ಖಡಕ್ ಎಚ್ಚರಿಕೆ ನೀಡಲಾಗುತ್ತಿದೆ. ಆರೋಗ್ಯದಿಂದ ಸದೃಢತೆ ಹೊಂದಿದವರಿಗೆ ವರ್ಗಾವಣೆ ಹಾಗೂ ಬಡ್ತಿಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಕೆಎಸ್ಆರ್ ಪಿಯಲ್ಲಿ ಆರೋಗ್ಯ ಸುಧಾರಣೆಗೆ ಒತ್ತು ನೀಡಿದ ಪರಿಣಾಮವೇ ಅನಾರೋಗ್ಯಕ್ಕೆ ಒಳಗಾಗುವ ಪ್ರಮಾಣ ಶೇ. 30 ರಷ್ಡು ಕಡಿಮೆಯಾಗಿದೆ. ಅಲ್ಲದೇ ಹಣಕಾಸಿನ ಖರ್ಚಿನಲ್ಲೂ ಶೇ. 20ರಷ್ಟು ಕಡಿಮೆಯಾಗಿದೆ ಎಂದು ಎಡಿಜಿಪಿ ವಿವರಣೆ ನೀಡಿದರು.
ವರ್ಗಾವಣೆ ಹಾಗೂ ಬಡ್ತಿಯಲ್ಲಿ ಪಾರದರ್ಶಕತೆ ಅಳವಡಿಸಲಾಗಿದೆ ಎಂದು ಪುನರುಚ್ಚಿಸಿದ ಅಲೋಕ್ ಕುಮಾರ್ ಅವರು, ಕೆಎಸ್ಆರ್ ಪಿಗೆ 2500 ಹುದ್ದೆ(ಪೇದೆ)ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ತಿಂಗಳು ನೇಮಕಾತಿ ಆದೇಶ ನೀಡಲಾಗುತ್ತಿದೆ. ಏಪ್ರಿಲ್ ತಿಂಗಳಿನಿಂದ ತರಬೇತಿ ಶುರುವಾಗಲಿದೆ ಎಂದರು.
ಇದನ್ನೂ ಓದಿ:ಫೆ.20ರಂದು ರಾಜ್ಯದ 227 ಕಡೆ ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ: ಸಚಿವ ಅಶೋಕ್
ಇದಕ್ಕೂ ಮುನ್ನ ಎಡಿಜಿಪಿ ಅಲೋಕ್ ಕುಮಾರ್ ಮಂಗಳವಾರ ಬೆಳಿಗ್ಗೆ ಸಶಕ್ತ ಕಲಬುರಗಿ, ಕೋವಿಡ್ ಲಸಿಕೆ ಪಡೆಯುವುದು ಹಾಗೂ ಮಾದಕ ದ್ರವ್ಯ ವ್ಯಸನಮುಕ್ತ ಕಲಬುರಗಿ ಓಟದಲ್ಲಿ ಪಾಲ್ಗೊಂಡು ಆರೋಗ್ಯ ಸುಧಾರಣೆಗೆ ಜಾಗೃತಿ ಮೂಡಿಸಿದರು.