Advertisement

ಅದೇ ಪ್ರೀತಿ ಹೊಸ ರೀತಿಜಾನು ಜೊತೆ ಅವನು!

08:27 AM Aug 12, 2019 | Team Udayavani |

ಕನ್ನಡದಲ್ಲಿ ‘ಜಾನು’ ಶೀರ್ಷಿಕೆಯ ಚಿತ್ರ ಬಂದಿರುವುದು ಗೊತ್ತೇ ಇದೆ. ಈಗ ಇದೇ ಶೀರ್ಷಿಕೆ ಹೋಲುವಂತಹ ‘ನಾನು ನನ್‌ ಜಾನು’ ಎಂಬ ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಇದು ಲವ್‌ಸ್ಟೋರಿಯ ಚಿತ್ರವಾಗಿದ್ದು, ‘ಬದುಕೇ ಚೆಂದ ಇನ್ನು’ ಎಂಬ ಅಡಿಬರಹವಿದೆ. ಹುಡುಗನೊಬ್ಬ ಜೀವನದಲ್ಲಿ ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಹೇಗೆಲ್ಲಾ ಪರಿಶ್ರಮ ಪಡುತ್ತಾನೆ. ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ತನ್ನ ಜೊತೆಯಲ್ಲಿದ್ದವರನ್ನು ಹೇಗೆ ಕಳೆದುಕೊಳ್ಳುತ್ತಾನೆ. ಅಂತಿಮವಾಗಿ ಈ ಸಾಧಕ ಹುಡುಗನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಅನ್ನೋದೇ ಕಥೆಯ ಒಂದು ಎಳೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರ ಇತ್ತೀಚೆಗೆ ಟ್ರೇಲರ್‌ ಬಿಡುಗಡೆ ಮಾಡಿದೆ.

Advertisement

ಶ್ರೀಹರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಕ’, ‘ಮೋಜೋ’ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮನು ಈ ಚಿತ್ರದ ಹೀರೋ. ಚಿತ್ರದಲ್ಲಿ ಬೇಜವಾಬ್ದಾರಿ ಮತ್ತು ಜವಾಬ್ದಾರಿಯ ಹುಡುಗನಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಮನು ಕಾಣಿಸಿಕೊಂಡಿದ್ದಾರಂತೆ. ನವನಟಿ ಋತ್ವಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕುಟುಂಬದವರಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಿರುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಇನ್ನು ಸೃಜನ್‌ ಲೋಕೇಶ್‌ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲವ್‌, ಆ್ಯಕ್ಷನ್‌, ಸೆಂಟಿಮೆಂಟ್ ಜೊತೆಗೆ ನವಿರಾದ ಹಾಸ್ಯ ಚಿತ್ರದಲ್ಲಿದ್ದು, ನೋಡುಗರಿಗೆ ಪರಿಪೂರ್ಣ ಮನರಂಜನೆ ಜೊತೆಗೆ ಅವರ ಹಳೆಯ ಲವ್‌ ಸ್ಟೋರಿ ನೆನಪಿಗೆ ಬರೋದು ಪಕ್ಕಾ ಎನ್ನುತ್ತದೆ ಚಿತ್ರತಂಡ.

‘ನಾನು ನನ್‌ ಜಾನು’ ಚಿತ್ರದಲ್ಲಿ ಕರ್ನಾಟಕದ ಸುಂದರ ಸ್ಥಳಗಳನ್ನು ಸೆರೆಹಿಡಿಯಲಾಗಿದ್ದು, ಚಿತ್ರಕ್ಕೆ ಆನಂದ್‌ ಇಳಯರಾಜ-ಮಾರ ವರ್ಮನ್‌ ಛಾಯಾಗ್ರಹಣ, ಎನ್‌.ಎಂ ವಿಶ್ವ ಸಂಕಲನವಿದೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಶ್ರೀಧರ್‌ ಕಶ್ಯಪ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಅಪ್ಪು ವೆಂಕಟೇಶ್‌ ಸಾಹಸ, ಹೇಮಂತ್‌ ರಾಜ್‌ ನೃತ್ಯ ಸಂಯೋಜನೆಯಿದೆ.

ಕೆಂಪೆಗೌಡ. ಎನ್‌ ಹಾಗೂ ಹರೀಶ್‌. ಪಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್‌ ಮುಂದಿರುವ ‘ನಾನು ನನ್‌ ಜಾನು’ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದರೆ, ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next