ಆಡಿಯೋ ಹೊರಬಂದ ನಂತರ ಮೊದಲು ಮಾತಿಗಿಳಿದ ನಿರ್ದೇಶಕ ನಟ ಆರಾಧ್ಯ ಹೇಳಿದ್ದಿಷ್ಟು. “ಈ ಚಿತ್ರದ ಶೀರ್ಷಿಕೆ ಹುಟ್ಟೋಕೆ ಕಾರಣ. ಪಾದಯಾತ್ರೆ. ಒಮ್ಮೆ ಮಾದೇಶನ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಭಕ್ತರೊಂದಿಗೆ ಮಾತನಾಡುವಾಗ, ಮಾದೇಶನನ್ನು ಕೂಗಿ ಕರೆದರೆ ಖಂಡಿತ ಬಂದು ಸಮಸ್ಯೆ ನಿವಾರಿಸುತ್ತಾನೆ ಅಂತ ಹೇಳುತ್ತಿದ್ದರು. ಆಗ ಅಲ್ಲೇ ಹರಕೆ ಹೊತ್ತುಕೊಂಡೆ ನಿನ್ನ ಪವಾಡದ ಸಿನಿಮಾ ಮಾಡ್ತೀನಿ ಆಶೀರ್ವದಿಸು ಮಾದೇವ ಅಂದುಕೊಂಡೆ. ಒಂದು ವರ್ಷದ ಒಳಗೆ ಚಿತ್ರ ಶುರುವಾಗಿ ಬಿಡುಗಡೆಗೂ ಸಿದ್ಧವಾಗಿದೆ. ಇನ್ನು, “ಕೂಗಿ ಕರೆದೆನಲ್ಲೋ ಮಾದೇವ’ ಎಂಬ ಶೀರ್ಷಿಕೆ ಕೂಡ ಅಲ್ಲೇ ಹುಟ್ಟುಕೊಂಡಿತು. ಇದಕ್ಕೂ ಮುನ್ನ ಮಾದೇವನ ಕುರಿತು ಹಾಡೊಂದನ್ನು ಬರೆದು ನಿರ್ಮಾಪಕರಿಗೆ ಕೇಳಿಸಿದ್ದೆ. ಅವರು ಇಷ್ಟಪಟ್ಟು, ಇದನ್ನು ಇಟ್ಟುಕೊಂಡು ಚಿತ್ರ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇ ತಡ, ಚಿತ್ರವಾಯ್ತು. ಇದು ಹಳ್ಳಿಯೊಂದರ ಭಕ್ತ ಕುಟುಂಬದ ಕಷ್ಟ ನಷ್ಟಗಳ ಕುರಿತ ಚಿತ್ರ. ಆ ಕುಟುಂಬಕ್ಕೆ ಮಂತ್ರವಾದಿಯೊಬ್ಬ ಕಷ್ಟ ಕೊಡುತ್ತಾನೆ. ಆಗ ಭಕ್ತರ ಕರೆಗೆ ಬರುವ ಮಾದೇವ ಅವರ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾನೆ ಎಂಬುದೇ ಸಾರಾಂಶ. ಮಂಡ್ಯ, ಕೆ.ಎಂ.ದೊಡ್ಡಿ, ಮಾದೇಶ್ವರನ ಬೆಟ್ಟ ಸುತ್ತಮುತ್ತ ಚಿತ್ರೀಕರಿಸಲಾಗಿದೆ’ ಎಂಬ ವಿವರ ಕೊಟ್ಟರು ನಿರ್ದೇಶಕರು.
Advertisement
ವಿಷ್ಣುಸಿಂಹ ಚಿತ್ರದ ನಾಯಕ. ಇವರಿಗಿದು ಮೊದಲ ಚಿತ್ರ. “ನನಗೆ ಸಿಕ್ಕ ಒಳ್ಳೆಯ ಅವಕಾಶ ಇದು. ನಾನು ಸಿನಿಮಾಗೆ ಬೇಕಿದ್ದೆಲ್ಲವನ್ನೂ ಕಲಿತಿದ್ದೇನೆ. ಆದರೆ, ಫೈಟ್ ಕಲಿತಿರಲಿಲ್ಲ. ಆದರೂ ಇಲ್ಲಿ ಎರಡು ಭರ್ಜರಿ ಫೈಟ್ ಮಾಡಿದ್ದೇನೆ. ಡ್ಯಾನ್ಸ್ ಕೂಡ ಸಿಂಪಲ್ ಆಗಿಯೇ ಇದೆ. ಮೊದಲ ಸಲವೇ ಭಕ್ತಿಪ್ರಧಾನ ಚಿತ್ರ ಮಾಡಿದ್ದು ಸಂತಸವಾಗಿದೆ’ ಎಂಬುದು ವಿಷ್ಣು ಸಿಂಹ ಮಾತು. ಇನ್ನು ನಾಯಕಿ ರಕ್ಷಿತಾಗೂ ಇದು ಮೊದಲ ಚಿತ್ರ. ಅವರಿಲ್ಲಿ ದ್ವಿತಿಯಾರ್ಧದಲ್ಲಿ ಬಂದರೂ ಗುರುತಿಸಿಕೊಳ್ಳುವಂತಹ ಪಾತ್ರ ನನ್ನ ಪಾಲಿಗೆ ಬಂದಿದೆ ಎಂದು ಖುಷಿಗೊಂಡರು. ಕುಮಾರಿ ಸೃಷ್ಠಿ ಇಲ್ಲಿ ಮಾದೇವನ ಭಕ್ತೆಯಾಗಿ ನಟಿಸಿದ ಅನುಭವ ಹಂಚಿಕೊಂಡರು.