Advertisement

ವಿಕಲಚೇತನರ ಸ್ಫೂರ್ತಿಯ ಕಥೆ ; ಮನರಂಜನೆ ಜೊತೆಗೆ ಸಂದೇಶ

09:06 AM May 11, 2019 | Team Udayavani |

ಸದೃಢ ಕಾಯ, ಉತ್ತಮ ಆರೋಗ್ಯ, ಒಳ್ಳೆಯ ಸ್ಥಿತಿ-ಗತಿಗಳಿದ್ದರೂ ಅದೆಷ್ಟೋ ಜನರು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾ, ತಮ್ಮ ಬದುಕನ್ನೇ ಹಾಳು ಮಾಡಿಕೊಂಡ ನಿದರ್ಶನಗಳು ನಮ್ಮ ಮುಂದೆ ಸಾಕಷ್ಟಿವೆ. ಆದರೆ ಇದ್ಯಾವುದೂ ಇಲ್ಲದ ಇಬ್ಬರು ಬಾಲಕರು ತಮ್ಮ ಎದುರಿಗಿದ್ದ ಅನೇಕ ಸಂಕಷ್ಟಗಳನ್ನು ಮೆಟ್ಟಿನಿಂತು ಹಲವರಿಗೆ ಮಾದರಿಯಾಗು­ತ್ತಾರೆ. ಇಂಥದ್ದೊಂದು ಪರಿಕಲ್ಪನೆಯನ್ನು ಇಟ್ಟುಕೊಂಡು ಈಗ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಎಂಬ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಈ ವಾರ ತೆರೆಗೆ ಬರುತ್ತಿದೆ.

Advertisement

ಅಂದಹಾಗೆ, “ಜಕಣಾಚಾರಿ ಮತ್ತು ಶುಕ್ಲಾಚಾರಿ’ ಎಂಬ ಹೆಸರು ಚಿತ್ರದಲ್ಲಿದ್ದರೂ, ಈ ಚಿತ್ರದ ಕಥೆಗೂ, ಪುರಾಣ ಪುಣ್ಯಕಥೆಗಳಿಗೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆ, ಅದರ ಆಶಯಕ್ಕೆ ಪೂರಕವಾಗಿದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಎಂಬ ಹೆಸರು ಇಟ್ಟುಕೊಂಡಿದೆ. ಸದ್ಯ ಬಿಡುಗಡೆಯ ಹಂತ ತಲುಪಿರುವ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಚಿತ್ರದ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೂಲತಃ ಗಾರ್ಮೆಂಟ್ಸ್‌ ಉದ್ಯಮಿ ಆಗಿರುವ ಹೆಚ್‌. ಸೋಮಶೇಖರ್‌, “ರಾಜ್‌ಪ್ರಿಯ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ನಿರ್ಮಾಣದ ಬಗ್ಗೆ ಮಾತನಾಡುವ ಹೆಚ್‌. ಸೋಮಶೇಖರ್‌, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಕೀಟನಾಶಕ ಸಿಂಪಡನೆಯಿಂದ ಆರೋಗ್ಯ ಕಳೆದುಕೊಂಡಿರುವ ಕುಟುಂಬವೊಂದರ ಚಿತ್ರಣ ಈ ಸಿನಿಮಾದಲ್ಲಿದೆ. ಎಂಡೋಸಲ್ಫಾನ್‌ನಿಂದ ಆಗಿರುವ ಅನಾಹುತವನ್ನು ಇಂದಿಗೂ ಅದೆಷ್ಟೋ ಕುಟುಂಬಗಳು ಎದುರಿಸುತ್ತಿವೆ.

ಅಂತಹ ಕುಟುಂಬಗಳಲ್ಲಿ ಒಂದು ಕುಟುಂಬದ ಕಥೆ ನಮ್ಮ ಸಿನಿಮಾ. ಒಂದು ಕುಟುಂಬದಲ್ಲಿ ಹುಟ್ಟಿದ ಎರಡೂ ಮಕ್ಕಳು ಅಂಗವಿಕಲರಾಗಿರುತ್ತಾರೆ. ಇಂತಹ ಮಕ್ಕಳನ್ನು ಕರೆದುಕೊಂಡು ಜೀವನ ನಿರ್ವಹಣೆಗಾಗಿ ಕುಟುಂಬವೊಂದು ಬೆಂಗಳೂರಿನಂತಹ ಮಹಾನಗರಕ್ಕೆ ಬರುತ್ತದೆ. ಇಲ್ಲಿ ಆಕುಟುಂಬ ಏನೇನು ಸವಾಲುಗಳನ್ನು ಎದುರಿಸುತ್ತದೆ. ಹಳ್ಳಿಯಿಂದ ಮಹಾನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಯಶಸ್ವಿಯಾಗುತ್ತಾರಾ, ಇಲ್ಲವಾ ಎಂಬುದೇ ಚಿತ್ರದ ಕಥಾಹಂದರ’ ಎನ್ನುತ್ತಾರೆ.

ಕನ್ನಡ ಮತ್ತು ತುಳು ಭಾಷೆಯಲ್ಲಿ ಕೆಲ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ವಿಕಲಚೇತನ ಪ್ರತಿಭೆ ರವಿವರ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರವಿವರ್ಮ, “ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನ ಶೈಲಿಯಲ್ಲಿ ಬದಲಾಗಬಹುದು. ಆದರೆ ವಿಕಲಚೇತನರ ಜೀವನ ಹಾಗಲ್ಲ. ಏನಾದರೂ ಮಾಡಬೇಕೆಂದರೆ, ಅದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ. ಆದರೂ ಅವೆಲ್ಲವನ್ನೂ ಮೆಟ್ಟಿನಿಂತು ಇಬ್ಬರು ಹುಡುಗರು, ಹಳ್ಳಿಯಿಂದ ನಗರಕ್ಕೆ ಬದುಕು ಸಾಗಿಸಲು ಬರುತ್ತಾರೆ. ತಮ್ಮ ಜೀವನದಲ್ಲಿ ಏನೇನು ಸವಾಲುಗಳನ್ನು ಎದುರಿಸುತ್ತಾರೆ ಅನ್ನೋದೆ ಚಿತ್ರದ ಕಥೆಯ ಒಂದು ಎಳೆ’ ಎಂದರು.

Advertisement

ಇನ್ನೊಂದು ವಿಶೇಷವೆಂದರೆ, ಈ ಚಿತ್ರದ ಪ್ರಮುಖ ಪಾತ್ರವನ್ನು ವಿಕಲಚೇತನ ಮಕ್ಕಳೆ ನಿರ್ವಹಿಸಿದ್ದಾರೆ. ಆರಂಭದಲ್ಲಿ ಈ ಪಾತ್ರಕ್ಕೆ ಡ್ರಾಮ ಜ್ಯೂನಿಯರ್ ಮಕ್ಕಳನ್ನು ಆಯ್ಕೆ ಮಾಡಲು ಯೋಚಿಸಲಾಗಿತ್ತು. ಆದರೆ ಚಿತ್ರದ ಪಾತ್ರಗಳು ನೈಜವಾಗಿ ಮೂಡಿಬರಲಿ ಎಂಬ ಕಾರಣಕ್ಕೆ ವಿಕಲಚೇತನರಾದ ಮಹೇಶ್‌ ಮತ್ತು ಜೇಯಾದ್‌ ಎಂಬ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ ಅವರಿಂದ ಈ ಪಾತ್ರಗಳನ್ನು ಮಾಡಿಸಲಾಗಿದೆ.

ಉಳಿದಂತೆ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಚಿತ್ರದಲ್ಲಿ ಕಿರಣ್‌, ವಿನಯ್‌, ಮುನಿ, ಮನದೀಪ್‌ ರಾಯ್‌, ಮೂಗು ಸುರೇಶ್‌, ಪಂಕಜಾ ರವಿಶಂಕರ್‌, ಗಿರೀಶ್‌ ಜಟ್ಟಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಛಾಯಾಗ್ರಹಕ ಸಾಮ್ರಾಟ್‌ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ರವಿ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಸಿ.ಜಿ ಅನಿಲ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ವಿಕ್ರಂ ಯಶೋಧರ್‌ ಮತ್ತು ಪ್ರಶಾಂತ್‌ ಕಾದಲ್‌ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಂದಷ್ಟು ಪ್ರಯೋಗಗಳನ್ನು ಹೊತ್ತು ತೆರೆಮೇಲೆ ಬರುತ್ತಿರುವ “ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next