ನವದೆಹಲಿ: ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡುವ ಮೂಲಕ ಇದನ್ನು ಮತ್ತಷ್ಟು ಆಕರ್ಷಕವನ್ನಾಗಿಸಿದೆ. ಇದರಿಂದ ತೆರಿಗೆದಾರರಿಗೆ ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲಗಳಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬುಧವಾರ ಬಜೆಟ್ ಮಂಡನೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ಸರ್ಕಾರ ಜಾರಿಗೆ ತಂದಿದ್ದ ಐಚ್ಛಿಕ ತೆರಿಗೆ ಪದ್ಧತಿಯಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದೆ ಎಂದರು.
ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆಗಳಾಗಬೇಕೆಂಬ ಬೇಡಿಕೆಯನ್ನು ದೇಶದ ತೆರಿಗೆದಾರರು ಮುಂದಿಟ್ಟಿದ್ದರಲ್ಲದೆ ಈ ಪದ್ಧತಿಯನ್ನು ಇನ್ನಷ್ಟು ಸರಳಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಸರಕಾರ ಕೆಲವೊಂದು ಮಹತ್ತರವಾದ ಮಾರ್ಪಾಡುಗಳನ್ನು ಮಾಡಿ ತೆರಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ತೆರಿಗೆದಾರರು ಹಳೆಯ ಪದ್ಧತಿಯ ಬದಲು ಹೊಸ ಪದ್ಧತಿಯಲ್ಲಿ ತೆರಿಗೆಯನ್ನು ಪಾವತಿಸಲಿದ್ದಾರೆ ಎಂದರು.
ಹೊಸ ತೆರಿಗೆ ಪದ್ಧತಿಯು ತೆರಿಗೆ ಪಾವತಿದಾರರಿಗೆ ಈ ವಿಧಾನವು ಅತ್ಯಂತ ಸರಳವಾಗಿದ್ದು ಯಾವುದೇ ಹೊರೆಯಾಗಬಾರದು ಎಂಬ ಉದ್ದೇಶದಿಂದ ಸರಕಾರ ಈ ಮಾರ್ಪಾಡುಗಳನ್ನು ಮಾಡಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆದಾಯ ತೆರಿಗೆದಾರರು ಹೊಸ ಪದ್ಧತಿಯಂತೆ ತೆರಿಗೆಯನ್ನು ಪಾವತಿಸಲಿದ್ದಾರೆ. ಒಂದು ವೇಳೆ ಹಳೆಯ ಪದ್ಧತಿಯೇ ಸೂಕ್ತ ಎಂದು ತೆರಿಗೆದಾರರಿಗೆ ಅನಿಸಿದರೆ ಅಂಥವರು ಆ ವ್ಯವಸ್ಥೆಯಲ್ಲಿಯೇ ಮುಂದುವರಿಯಬಹುದು ಎಂದು ನಿರ್ಮಲಾ ಸೀತಾರಾಮನ್ ಇದೇ ವೇಳೆ ಸ್ಪಷ್ಟಪಡಿಸಿದರು.