Advertisement

ಸಮರ್ಥ ನಾಯಕತ್ವದಿಂದ ನವ ಭಾರತದ ಕನಸು ಸಾಕಾರ: ಚಕ್ರವರ್ತಿ ಸೂಲಿಬೆಲೆ

11:36 PM Sep 25, 2019 | Sriram |

ಕಡಬ: ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದಾಗಿ ಕಾಶ್ಮೀರದಲ್ಲಿ 370ನೇ ವಿಧಿ ಹಾಗೂ ಆರ್ಟಿಕಲ್‌ 35 ರದ್ದುಗೊಂಡ ಬಳಿಕ ಹೊಸ ಭಾರತದ ನಿರ್ಮಾಣ ಕನಸು ಸಾಕಾರಗೊಳ್ಳುತ್ತಿದೆ. ಭಾರತ ಸಾರ್ವ ಭೌಮತೆಯತ್ತ ಸಾಗುತ್ತಿದೆ. ಕಾಶ್ಮೀರದ ಜನ ನೆಮ್ಮದಿಯ ಬದುಕಿಗೆ ಮರಳುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಅವರು ಮಂಗಳವಾರ ಸಂಜೆ ಕಡಬ ಯುವ ಬ್ರಿಗೇಡ್‌ ಆಶ್ರಯದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿದ ಬಹಿರಂಗ ಸಮಾವೇಶದಲ್ಲಿ “ಆರಿತು ಕಾಶ್ಮೀರದ ಬೆಂಕಿ’ ಎನ್ನುವ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಸಹಜ ಸ್ಥಿತಿಯತ್ತ ಕಾಶ್ಮೀರ
ನರೇಂದ್ರ ಮೋದಿಯವರು ಕಾಶ್ಮೀರದ ಜನತೆಯ ಪಾಲಿಗೆ ಕಂಠಕವಾಗಿದ್ದ ವಿಧಿ ರದ್ದತಿಗೆ ಹೊರಟಾಗ ಅನೇಕರು ಕಾಶ್ಮೀರದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಭಯೋತ್ಪಾದಕರು ಕಾಶ್ಮೀರವನ್ನು ಚಿಂದಿ ಮಾಡುತ್ತಾರೆ ಎಂದು ಬೊಬ್ಬೆ ಹೊಡೆದಿದ್ದರು. ಆದರೆ ಅಂತಹ ಯಾವುದೇ ಘಟನೆಗಳು ನಡೆಯದಿದ್ದಾಗ ಎಲ್ಲರ ಬಾಯಿ ಮುಚ್ಚಿ ಹೋಯಿತು. ಕಿವಿಗಳು ಕಿವುಡಾದವು. ಪಾಕಿಸ್ಥಾನ ಹೊರತುಪಡಿಸಿ ಜಗತ್ತಿನ ಯಾವುದೇ ರಾಷ್ಟ್ರ ಅದನ್ನು ವಿರೋಧಿಸಿಲ್ಲ. ಕಾಶ್ಮೀರದಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಪ್ರತ್ಯೇಕತೆ ಕೂಗು ಕ್ಷೀಣವಾಗಿದೆ. ಅಲ್ಲಿನ ಅಂಗಡಿ ಮುಂಗಟ್ಟುಗಳು ತೆರದು ವ್ಯಾಪಾರ ವಹಿವಾಟು ನಿರ್ಭಯವಾಗಿ ನಡೆಸುತ್ತಿವೆ.

ಶಾಲಾ ಕಾಲೇಜುಗಳು ತೆರೆದು ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಲು ಪ್ರಾರಂಭವಾಗಿದೆ. ಪಾಕ್‌ ಪ್ರಾಯೋಜಿತ ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗಿದೆ. ಈಗ ಕಾಶ್ಮೀರದಲ್ಲಿ ಜಾಗ ಖರೀದಿಸಲು ದೇಶದ ಜನ ಮಂದಾಗುತ್ತಿದ್ದಾರೆ. ಮಂಗಳೂರಿನ ಬಿ.ಆರ್‌. ಶೆಟ್ಟಿಯಂತಹವರು ಕಾಶ್ಮೀರದಲ್ಲಿ ಫಿಲ್ಮ್ ಸಿಟಿ ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದಾರೆ ಎನ್ನುವುದು ಅಲ್ಲಿನ ಪರಿಸ್ಥಿತಿ ಯಾವ ರೀತಿಯಲ್ಲಿ ಶಾಂತವಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಕಾಶ್ಮೀರದಲ್ಲಿ 370 ವಿಧಿ ರದ್ಧತಿಯಿಂದ ಅಲ್ಲಿನ ಜನ ನೆಮ್ಮದಿಯಿಂದ ನಾವೂ ಭಾರತೀಯರು ಎಂದು ಹೆಮ್ಮೆಯಿಂದ ಬದುಕುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಅತಿಥಿಯಾಗಿದ್ದ ನಿವೃತ್ತ ಸೈನಿಕ ನಾಯಕ್‌ ಸುಬೇದಾರ್‌ ಡಿ.ಆರ್‌. ರಾಧಾಕೃಷ್ಣ ಕುಳ ಹಾಗೂ ಪ್ರಸ್ತುತ ಯೋಧರಾಗಿ ಸೇವೆ ಸಲ್ಲಿಸುತ್ತಿರುವ ದೇವಿಪ್ರಸಾದ್‌ ಸೂರ್ಪಳ ಅವರನ್ನು ಯುವ ಬ್ರಿಗೇಡ್‌ ವತಿಯಿಂದ ಸಮ್ಮಾನಿಸಲಾಯಿತು.

Advertisement

ಕಡಬ ಯುವ ಬ್ರಿಗೇಡ್‌ ಕಾರ್ಯಕರ್ತ ಕಾಶೀನಾಥ್‌ ಗೋಗಟೆ ಸ್ವಾಗತಿಸಿ, ಗಿರೀಶ್‌ ಕೊರುಂದೂರು ವಂದಿಸಿದರು. ಸರಸ್ವತೀ ವಿದ್ಯಾಲಯದ ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ ನಿರೂಪಿಸಿ, ರಾಮಚರಣ್‌ ಕೋಡಿಂಬಾಳ ವಂದೇ ಮಾತರಂ ಹಾಡಿದರು.

ಸಭೆಗೆ ಅಡ್ಡಿಯಾದ ಮಳೆ
ಸಭೆಯನ್ನು ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿತ್ತು. ಸೂಲಿಬೆಲೆ ಅವರು ಭಾಷಣ ಪ್ರಾರಂಭಿಸುತ್ತಿದ್ದಂತೆಯೇ ಮಳೆ ಪ್ರಾರಂಭವಾಯಿತು. ನೆರೆದಿದ್ದ ಜನಸ್ತೋಮ ಚದುರಿ ದೇವಸ್ಥಾನ, ಸಭಾಭವನ ಮೊದಲಾದೆಡೆ ಆಶ್ರಯ ಪಡೆದರು. ಮಳೆ ನಿಲ್ಲುವ ಸೂಚನೆ ಸಿಗದೇ ಹೋದಾಗ ದೇವಸ್ಥಾನದ ಸಭಾಭವನಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು. ಸಭಿಕರು ಅಲ್ಲಿ ನೆಲದಲ್ಲಿಯೇ ಕುಳಿತು ಭಾಷಣ ಆಲಿಸಿದರು.

ಜಗದ್ಗುರುವಾಗುವತ್ತ ಭಾರತ
ಈ ದೇಶದಲ್ಲಿ ಕಾಶ್ಮೀರದ ಬಗ್ಗೆ ಗಟ್ಟಿ ನಿಲುವು ತಳೆಯಲು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಬಳಿಕ ಬಂದ ತಾಕತ್ತಿನ ಮನುಷ್ಯ ಎಂದರೆ ನರೇಂದ್ರ ಮೋದಿ. ಅವರ ನಿಲುವಿನಿಂದಾಗಿ ಭಾರತ ಜಗದ್ಗುರುವಾಗಿ ಹೊರಹೊಮ್ಮುತ್ತಿದೆ. ಆರ್ಥಿಕ ಹಿಂಜರಿತ ಉಂಟಾಗಿದೆ ಎನ್ನುವ ಆರೋಪಗಳ ನಡುವೆಯೂ ಭಾರತದ ಪ್ರಗತಿಯ ನಾಗಾಲೋಟ ಮುಂದುವರಿಸಿದೆ. ಅಮೆರಿಕದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50 ಸಾವಿರ ಜನ ಸೇರಿ ಅಲ್ಲಿ ಮೋದಿ ಅವರಿಗೆ ಸಿಕ್ಕ ಗೌರವ ಅಭೂತಪೂರ್ವ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next