Advertisement

65000 ಅಡಿ ಎತ್ತರದಲ್ಲಿ 90 ದಿನ ಹಾರಾಡುವ ಡ್ರೋನ್‌!

02:36 PM Feb 05, 2021 | Team Udayavani |

ನವದೆಹಲಿ: ಮುಂದಿನ ಮೂರದಿಂದ ಐದು ವರ್ಷಗಳಲ್ಲೇ ಭಾರತದ ಸಶಸ್ತ್ರ ಪಡೆಗಳಿಗೆ ಸ್ವದೇಶಿ ನಿರ್ಮಿತ ಡ್ರೋನ್‌ “ಇನ್ಫಿನಿಟಿ’ ಸೇರ್ಪಡೆಯಾಗಲಿದ್ದು, ದೇಶದ ಮಾನವರಹಿತ ಡ್ರೋನ್‌ ಯುದ್ಧತಂತ್ರದಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. ಹಾಗೂ ಬೆಂಗಳೂರು ಮೂಲದ ಸ್ಟಾರ್ಟಪ್‌ ನ್ಯೂಸ್ಪೇಸ್‌ ಸಹಭಾಗಿತ್ವದಲ್ಲಿ ಈ ಡ್ರೋನ್‌ ಅಭಿವೃದ್ಧಿಗೊಳ್ಳುತ್ತಿದೆ. ಸೌರಚಾಲಿತ ಡ್ರೋನ್‌ ಇದಾಗಿರಲಿದ್ದು, ಮುಂದಿನ ತಲೆಮಾರಿನ ಯುದ್ಧ
ತಂತ್ರಕ್ಕೆ ಹೊಂದುವಂತೆ ಇದನ್ನು ತಯಾರಿಸಲಾಗಿದೆ.

Advertisement

ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌ ಸೇರಿದಂತೆ ವಿವಿಧ ಬಗೆಯ ಸೆನ್ಸರ್‌ಗಳನ್ನು ಒಳಗೊಂಡ ಇನ್ಫಿನಿಟಿ ಡ್ರೋನ್‌, ಶತ್ರುಗಳ ನೆಲದೊಳಗಿನ ಆಳವಾದ ಟಾರ್ಗೆಟ್‌ಗಳನ್ನು ಟ್ರ್ಯಾಕ್‌ ಮಾಡಿ, ಭಾರತದ ಇತರೆ ಡ್ರೋನ್‌ ವ್ಯವಸ್ಥೆಗಳು ಕೈಗೊಳ್ಳುವ ದಾಳಿಗಳಿಗೆ ಸಹಾಯ ಮಾಡುತ್ತದೆ. ಸದ್ಯ ಭಾರತದಲ್ಲಿ ಸ್ವದೇಶಿ ಕಾಂಬ್ಯಾಟ್‌ ಏರ್‌ ಟೀಮಿಂಗ್‌ ಸಿಸ್ಟಂ(ಸಿಎಟಿಎಸ್‌)ನ ಭಾಗವಾಗಿರುವ ವಾರಿಯರ್‌ ಲೋಯಲ್‌ ವಿಂಗ್‌ಮ್ಯಾನ್‌, ಆಲ್ಫಾ-ಎಸ್‌ ಸ್ವಾರ್ಮ್ ಡ್ರೋನ್‌ಗಳು, ಹಂಟರ್‌ ಕ್ರೂಸ್‌ ಕ್ಷಿಪಣಿಗಳು ದಾಳಿ ಯೋಜನೆಗಳನ್ನು ಕೈಗೊಳ್ಳುತ್ತವೆ.

ವಿಡಿಯೋ ನೇರ ಪ್ರಸಾರ: ದಾಳಿ ಡ್ರೋನ್‌ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ಮೇಲ್ವಿಚಾರಣಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯವನ್ನು ಇನ್ಫಿನಿಟಿ ಹೊಂದಿದ್ದು, ಇದರಿಂದಾಗಿ ಮಾನವರಹಿತ ಡ್ರೋನ್‌ ದಾಳಿಯು ಯಶಸ್ವಿಯಾಯಿತೋ, ಇಲ್ಲವೋ ಎಂಬುದನ್ನು ದೃಢಪಡಿಸಲು ನೆರವಾಗಲಿದೆ.

2019ರಲ್ಲಿ ಪಾಕಿಸ್ತಾನದ ಬಾಲಕೋಟ್‌ನ ಉಗ್ರ ಶಿಬಿರಗಳ ಮೇಲೆ ನಮ್ಮ ವಾಯುಪಡೆಯು ದಾಳಿ ನಡೆಸಿದಾಗ, ನಮ್ಮಲ್ಲಿ ಇಂಥದ್ದೊಂದು ತಂತ್ರಜ್ಞಾನ ಇರಲಿಲ್ಲ. ಹೀಗಾಗಿ, ದಾಳಿಯ ವಿಡಿಯೋ ದೊರೆತಿರಲಿಲ್ಲ ಹಾಗೂ ಅದರ ಯಶಸ್ಸಿನ ಕುರಿತು ಪ್ರಶ್ನೆಗಳನ್ನೂ ಎದುರಿಸಬೇಕಾಯಿತು.

ವೈಶಿಷ್ಟ್ಯಗಳೇನು?
● ಇದು ಸೌರ ಚಾಲಿತ ಡ್ರೋನ್‌, 90 ದಿನಗಳ ಕಾಲ 65,000ಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ
● ಅತ್ಯಾಧುನಿಕ ಸಿಂಥೆಟಿಕ್‌ ಅಪರ್ಚರ್‌ ರೇಡಾರ್‌ ಹೊಂದಿದೆ, ಹಲವು ಬಗೆಯ ಸೆನ್ಸರ್‌ಗಳುಳ್ಳ ಡ್ರೋನ್‌
● ದಾಳಿ ಡ್ರೋನ್‌ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ನಿಗಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯ
● ವಿಪತ್ತು ನಿರ್ವಹಣೆ, ಸ್ಮಾರ್ಟ್‌ ಸಿಟಿ, ಕರಾವಳಿ ರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೂ ಇವುಗಳ ಬಳಕೆ ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next