Advertisement

ನವ ಬೆಂಗಳೂರಿನಿಂದ ನವ ಭಾರತ

11:52 AM Mar 09, 2018 | |

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ಇದೀಗ ರಾಜಧಾನಿಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರದ ಕುರಿತು “ನವ ಬೆಂಗಳೂರಿನಿಂದ ನವ ಭಾರತ’ (ನ್ಯೂ ಬೆಂಗಳೂರು ಫಾರ್‌ ನ್ಯೂ ಇಂಡಿಯಾ) ಅಭಿಯಾನ ಆರಂಭಿಸಲಿದೆ. ಅಭಿಯಾನ ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲಾಗಿದೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಅಭಿಯಾನದ ವಿವರ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ, ನಗರದ ಕಾಲೇಜು ಮಟ್ಟದಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, ನಗರಲ್ಲಿನ ಎಂಟು ಪ್ರಮುಖ ಸಮಸ್ಯೆಗಳ ಬಗ್ಗೆ ಸ್ಪರ್ಧೆ ಆಯೋಜಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಈ ಎಂಟೂ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದು ಹೇಳಿದರು.

ಅಭಿಯಾನದಡಿ ಮಾ.20ರಿಂದ 23ರವರೆಗೆ ನಗರದ ಏಳು ಕಾಲೇಜುಗಳಲ್ಲಿ ಸ್ಪರ್ಧಾ ಕೂಟಗಳು ನಡೆಯಲಿವೆ. ಕೆ.ಆರ್‌.ಪುರ, ಮಲ್ಲೇಶ್ವರ, ಬಸವನಗುಡಿ, ಮಾರತ್‌ಹಳ್ಳಿ, ನಾಗರಬಾವಿ, ಯಲಹಂಕ ಹಾಗೂ ಜಯನಗರದ ಆಯ್ದ ಕಾಲೇಜುಗಳಲ್ಲಿ ಎಂಟು ಸಮಸ್ಯೆಗಳ ಕುರಿತು ಪ್ರಬಂಧ, ಚರ್ಚೆ, ಮ್ಯಾಡ್‌ ಆ್ಯಡ್ಸ್‌, ಪೋಸ್ಟರ್‌ ಮೇಕಿಂಗ್‌ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಧಾನಿ ಜತೆ ಸಂವಾದದ ಅವಕಾಶ: ಆಯಾ ಕಾಲೇಜುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ತಂಡಕ್ಕೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು. ಅಲ್ಲದೆ, ಆಯ್ಕೆಯಾದ ಉತ್ತಮ ಪರಿಹಾರಗಳಿಗೆ ಸಂಬಂಧಿಸಿದಂತೆ ಮಾರ್ಚ್‌ ಕೊನೆಯ ವಾರ ನಡೆಯುವ ಸಮಾರಂಭದಲ್ಲಿ ವಿಜೇತರು ತಮ್ಮ ಪರಿಹಾರಗಳನ್ನು ಪಕ್ಷದ ರಾಷ್ಟ್ರೀಯ ನಾಯಕರೆದುರು ಪ್ರಸ್ತುತಪಡಿಸಲು ಅವಕಾಶ ನೀಡಲಾಗುವುದು.

ಅಲ್ಲದೆ, ಸ್ಪರ್ಧೆಯ ಅಂತಿಮ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಂವಾದ ನಡೆಸುವ ಅವಕಾಶವೂ ದೊರೆಯಲಿದೆ ಎಂದರು. ನಗರದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, ಅದಕ್ಕಾಗಿಯೇ www.newbengaluru.in ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.

Advertisement

ಅಲ್ಲದೆ, ಬೆಂಗಳೂರಿನ ಪರಿಸ್ಥಿತಿ, ಸಮಸ್ಯೆಗಳಿಗೆ ಪರಿಹಾರ ಕುರಿತ ಫೋಟೋ, 10 ಸ್ಲೆ„ಡ್‌ಗಳ ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿದೆ. ಈ ಪೈಕಿ 20 ಉತ್ತಮ ಫೋಟೋ ಮತ್ತು ಪವರ್‌ ಪಾಯಿಂಟ್‌ ಪ್ರಸಂಟೇಷನ್‌ಗಳನ್ನು ಕೂಡ ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ದ ಪರಿಹಾರಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ವಿವರಿಸಿದರು.

ಸ್ಪರ್ಧಿಗಳಿಗಿರುವ ಸಮಸ್ಯೆ-ಸವಾಲು
-ಟ್ರಾಫಿಕ್‌ ಗೋಳು, ನರಕದ ಬಾಳು- ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ
-ಗುಡ್ಡೆಬಿದ್ದ ಕಸ, ಹಸಿರು ಸರ್ವನಾಶ- ಗಾಬೇಜ್‌ ಸಿಟಿಯಿಂದ ಗಾರ್ಡನ್‌ ಸಿಟಿ ಹಿರಿಮೆ ಮರುಸ್ಥಾಪನೆ
-ಬೆಂಕಿ ಬಿದ್ದ ವಿಷದ ಕೆರೆ, ಊರ ತುಂಬ ಕೊಳಕು ನೊರೆ- ಅವಸಾನ ಹೊಂದುತ್ತಿರುವ ಕೆರೆ, ನದಿಗಳ ಪುನರುಜ್ಜೀವನ
-ಸುರಕ್ಷೆ ಇಲ್ಲದ ನಗರ, ಭಯದ ನೆರಳಲ್ಲಿ ನಗರ- ಬೆಂಗಳೂರನ್ನು ಸುರಕ್ಷಿತ ನಗರವಾಗಿಸುವುದು
-ಲಂಚ ರುಷುವತ್ತು, ಭ್ರಷ್ಟತೆಯ ಕರಾಮತ್ತು- ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹೇಗೆ?
-ಬಡವರ ದುಡಿಮೆ ಕಸಿತ, ಬಡ ಹೊಟ್ಟೆಗೆ ಹೊಡೆತ- ಬಡವರ ಸಬಲೀಕರಣದ ಮೂಲಕ ಬಡತನ ನಿರ್ಮೂಲನೆ
-ಕುಡಿವ ನೀರಿಗೂ ಗತಿ ಇಲ್ಲ, ಜನರ ಬವಣೆಗೆ ಮಿತಿ ಇಲ್ಲ- ಎಲ್ಲರಿಗೂ ಶುದ್ಧ ನೀರಿನ ಪೂರೈಕೆ
-ಕೊಲೆ, ಸುಲಿಗೆ, ಅತ್ಯಾಚಾರದ ಕೊನೆಯಾಗುವುದೆಂದು?- ನಗರದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪನೆ

Advertisement

Udayavani is now on Telegram. Click here to join our channel and stay updated with the latest news.

Next